ಮುಖ್ಯಮಂತ್ರಿಗಳಿಂದ ಒಳ ಮೀಸಲು ಜಾರಿ ವಿಳಂಬ

| Published : Aug 19 2025, 01:01 AM IST

ಸಾರಾಂಶ

ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಒಳಮೀಸಲಾತಿ ಜಾರಿಗೊಳಿಸಲು ಕೂಡಲೇ ಧ್ವನಿಗೊಳಿಸಬೇಕು

ಕನ್ನಡಪ್ರಭ ವಾರ್ತೆ ವಿಜಯಪುರ

ಒಳ ಮೀಸಲಾತಿ ಜಾರಿ ಮಾಡಲು ಸಿಎಂ ಸಿದ್ದರಾಮಯ್ಯನವರು ವಿಳಂಬ ಧೋರಣೆ ತೋರುತ್ತಿದ್ದಾರೆ. ಕೆಲ ಸಚಿವರ ಕೈಗೊಂಬೆಯಾಗಿರುವ ಅವರು ಸ್ವತಂತ್ರವಾಗಿ ಒಂದೇ ಒಂದು ಸಭೆ ನಡೆಸುವಷ್ಟೂ ಅಧಿಕಾರ ಉಳಿಸಿಕೊಂಡಿಲ್ಲ ಎಂದು ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟದ ಮುಖಂಡ ಭೀಮು ಮೇಲಿನಮನಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನದಾಸ ವರದಿ ಸಲ್ಲಿಸಿದ ತರುವಾಯ ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಆ.೧೯ಕ್ಕೆ ಮುಂದೆ ಹಾಕಿರುವುದು ವಿಳಂಬ ಧೋರಣೆಯ ಇನ್ನೊಂದು ಮುಖ. ಸಿದ್ದರಾಮಯ್ಯನವರು ೨೦೧೩ರಿಂದ ೨೦೧೮ ರವರೆಗೆ ಮುಖ್ಯಮಂತ್ರಿ ಆದಾಗಲೂ ಇದೇ ವಿಳಂಬ ದ್ರೋಹ ನಡೆಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ನಮ್ಮ ನೇರ ಆರೋಪವೆಂದರೆ ಸಿದ್ದರಾಮಯ್ಯನವರು ಮೂವರು ಸಚಿವರ ಕೈಗೊಂಬೆಯಾಗಿದ್ದಾರೆ ದೂರಿದರು.

ಸಹೋದರ ಸಂಬಂಧ ಜಾತಿಗಳಾದ ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳನ್ನು ರಾಜ್ಯ ಸರ್ಕಾರ ಕೇಂದ್ರದಲ್ಲಿ ಎಸ್ಟಿ ಪಟ್ಟಿಯಿಂದ ಕೈ ಬಿಡಲು ಸೂಚಿಸಿತ್ತು. ಆದರೆ ಮೂಲ ಮಾದಿಗ ಸಮುದಾಯದ ರಾಜಕೀಯ ನಾಯಕರಾದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಎ.ನಾರಾಯಣಸ್ವಾಮಿ ಬೇಡ ಎಂದು ಹೇಳಿದ್ದರು ಎಂದು ತಿಳಿಸಿದರು.

ಜಿಲ್ಲಾ ಮಾದಿಗರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ ಮಾತನಾಡಿ, ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಒಳಮೀಸಲಾತಿ ಜಾರಿಗೊಳಿಸಲು ಕೂಡಲೇ ಧ್ವನಿಗೊಳಿಸಬೇಕು ಎಂದರು. ಈ ವೇಳೆ ನ್ಯಾಯವಾದಿ ಎಸ್.ಎಚ್.ಲೋಟಗಿ, ಸದಾನಂದ ಗುನ್ನಾಪೂರ, ಭೀಮರಾಯ ಹುಲ್ಲೂರು, ವಿಠ್ಠಲ ನಡುವಿನಕೇರಿ, ರವಿಚಂದ್ರ ಹಾದಿಮನಿ, ಪರಶುರಾಮ ರೋಣಿಹಾಳ, ಹನಮಂತ ಬಿರಾದಾರ, ನಾಗರಾಜ ಮಾದರ, ಪ್ರಶಾಂತ ದೊಡಮನಿ, ಅಶೋಕ ನಂದಿ, ಶ್ರೀಕಾಂತ ಬಿರಾದಾರ, ಸಿದ್ದು ಪೂಜಾರಿ, ಶೇಖು ಆಲೂರ, ಹಣಮಂತ ಹಡಲಗಿ, ಸುಭಾಸ ಕಟ್ಟಿಮನಿ, ಏಕನಾತ ಓತಿಹಾಳ, ಅನೀಲ ರತ್ನಾಕರ, ದೇವೇಂದ್ರ ಹಡಗಲಿ, ವಿಜಯ ಮಾದರ, ಶಿವು ರೂಗಿ ಉಪಸ್ಥಿತರಿದ್ದರು.