ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 22ರಂದು ಬೆಳಗ್ಗೆ 11 ಗಂಟೆಗೆ ತುಂಬಿದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮೀನಭಾವಿ ತಿಳಿಸಿದ್ದಾರೆ.
ಮುನಿರಾಬಾದ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 22ರಂದು ಬೆಳಗ್ಗೆ 11 ಗಂಟೆಗೆ ತುಂಬಿದ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮೀನಭಾವಿ ತಿಳಿಸಿದ್ದಾರೆ.
''ಕನ್ನಡಪ್ರಭ''ದೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ತುಂಗಭದ್ರಾ ಜಲಾಶಯದ ಗೇಟ್ ನಂ. 19 ಕಿತ್ತುಕೊಂಡು ಹೋಗಿತ್ತು, ಅದನ್ನು ಕನ್ನಯ್ಯ ನಾಯ್ಡು ಹಾಗೂ ಅವರ ತಂಡ ಒಂದು ವಾರದಲ್ಲಿ ಸ್ಟಾಫ್ ಲಾಕ್ ಅಳವಡಿಸಿ ದುರಸ್ತಿ ಮಾಡಿದರು. ಈ ಹಿನ್ನೆಲೆಯಲ್ಲಿ ಮುನಿರಾಬಾದ್‌ನ ಸರ್ಕಾರಿ ಪ್ರೌಢಶಾಲೆ ಮ್ಯೆದಾನದಲ್ಲಿ ಕನ್ನಯ್ಯ ನಾಯ್ಡು ಹಾಗೂ ಅವರ ತಂಡದ 108 ಸದಸ್ಯರಿಗೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಬಾಗಿನ ಅರ್ಪಿಸಿದ ಆನಂತರ ಮಧ್ಯಾಹ್ನ 12 ಗಂಟೆಗೆ ಸನ್ಮಾನ ಮಾಡಲಿದ್ದಾರೆ ಎಂದು ಹೇಳಿದರು.ಸರ್ಕಾರಿ ಪ್ರೌಢಶಾಲೆ ಮ್ಯೆದಾನದಲ್ಲಿ 10 ಸಾವಿರ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸಭೆಗೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೂಡಿ ಬಂದ ಯೋಗ: ಜುಲೈ ತಿಂಗಳಲ್ಲಿ ಜಲಾಶಯ ಭರ್ತಿಯಾದಾಗ ತುಂಗಭದ್ರಾ ಮಾತೆಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿಯನ್ನು ಆಮಂತ್ರಿಸಲಾಗಿತ್ತು. ಆದರೆ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು. ಮತ್ತೆ 2ನೇ ಬಾರಿ ಆ. 13ರಂದು ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ದುರದೃಷ್ಟವಶಾತ್ ತುಂಗಭದ್ರಾ ಜಲಾಶಯದ 19ನೇ ಗೇಟ್ ಕಿತ್ತುಕೊಂಡು ಹೋದ ಕಾರಣ ಬಾಗಿನ ಅರ್ಪಣೆ ದಿನಾಂಕವನ್ನು ಮತ್ತೆ ಮುಂದೂಡಲಾಯಿತು. ಈಗ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಣೆಗೆ ಕಾಲ ಕೂಡಿ ಬಂದಿದೆ. ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಪ್ರಥಮ ಮುಖ್ಯಮಂತ್ರಿ ಎಂಬ ಕೀರ್ತಿಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.