ಸಾರಾಂಶ
-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ ಸಿಂಗ್
----ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿರಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ ಸಿಂಗ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.ಸರ್ಕಾರ ನಡೆಸಲು ಯಾವುದೇ ಸಮಸ್ಯೆಯಿಲ್ಲ ಊಹಾಪೂಹಗಳಿಗೆ ಯಾರು ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ. ಮಂಡಳಿ (ಕೆಕೆಆರ್ ಡಿಬಿ) ಮೂಲಕ ಈಭಾಗದ ಅಭಿವೃದ್ಧಿಗೆ ರಾಜ್ಯ ₹5000 ಕೋಟಿ ಬಿಡುಗಡೆ ಮಾಡುತ್ತಿದೆ. ಕಳೆದ ಬಾರಿ ಭಾಗಶಃ ಸಂಪೂರ್ಣ ಖರ್ಚಾಗಿದೆ ಈಹಿಂದೆ ಅನುದಾನ ವಾಪಸ್ ಹೋಗುತ್ತಿತ್ತು. ಈ ಬಾರಿಯೂ ಸಂಪೂರ್ಣ ಅನುದಾನ ಖರ್ಚು ಮಾಡಲಾಗುವುದು.ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ 41 ತಾಲೂಕುಗಳ ಅಭಿವೃದ್ಧಿ ರಾಜ್ಯ ಸರ್ಕಾರ ಎಂದಿಗೂ ಬದ್ದವಾಗಿದೆ. ಕಂದಾಯ ಇಲಾಖೆ ಹಾಗೂ ಕೆಕೆಆರ್‌ಡಿಬಿ ವತಿಯಿಂದ 8.60 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಹೊಸ ತಾಲೂಕುಗಳು ಸೇರಿ ಎಲ್ಲಾ ತಾಲೂಕುಗಳಲ್ಲಿ ಮಿನಿ ವಿಧಾನಸೌದಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 1000 ಕೋಟಿ.ರೂ. ವೆಚ್ಚದಲ್ಲಿ ಪ್ರತಿ ಕ್ಷೇತ್ರದಲ್ಲಿ 30 ಕಿ.ಮಿ ಕಲ್ಯಾಣ ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಯ ಭೂಮಿ ಪೂಜೆಗೆ ಮಾರ್ಚ್ 8ರಂದು ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಸಂಪುಟ ಸಭೆಯ ತೀರ್ಮಾನದಂತೆ 857 ಕೋಟಿ ವೆಚ್ಚದಲ್ಲಿ ಆರೋಗ್ಯ ಅವಿಷ್ಕಾರ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ 440 ಕೋಟಿ.ರೂ. ವೆಚ್ಚದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಶೇ.80 ರಷ್ಟು ಮುಗಿದಿದೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ಶೇ.25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದು ತಿಳಿಸಿದರು.ಈ ವೇಳೆ ಸಂಸದ ಜಿ.ಕುಮಾರ ನಾಯಕ, ಮುಖಂಡರಾದ ರವಿ ಬೋಸರಾಜು,ಕೆ.ಶಾಂತಪ್ಪ, ಮಹ್ಮದ್ ಶಾಲಂ, ಜಿಂದಪ್ಪ, ಮಲ್ಲೇಶ ಕೊಲಿಮಿ, ಜಿ.ಶಿವಮೂರ್ತಿ, ನರಸಿಂಹಲು ಮಾಡಗಿರಿ, ಬಿ.ರಮೇಶ, ಜಿ.ತಿಮ್ಮಾರೆಡ್ಡಿ, ಅಮರೆಗೌಡ ಹಂಚಿನಾಳ ಸೇರಿ ಅನೇಕರಿದ್ದರು.