ಸಾರಾಂಶ
ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಗೆಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ನಿರಾಶೆ ಮೂಡಿಸಿದ್ದಾರೆ. ಜಿಲ್ಲೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ವಿಶ್ವಾಸ ಮೂಡಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಟೀಕಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾಗಮಂಡಲ ಮೇಲ್ಸೇತುವೆ ಉದ್ಘಾಟನೆಗೆಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ನಿರಾಶೆ ಮೂಡಿಸಿದ್ದಾರೆ. ಜಿಲ್ಲೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ವಿಶ್ವಾಸ ಮೂಡಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಟೀಕಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾಗಮಂಡಲ ಮೇಲ್ಸೇತುವೆ ಉದ್ಘಾಟಿಸಿದ ಮುಖ್ಯಮಂತ್ರಿಗಳು, ರಾಜಕೀಯ ಪ್ರೇರಿತ ಭಾಷಣವನ್ನಷ್ಟೇ ಮಾಡಿ ಹೋಗಿದ್ದಾರೆ ಹೊರತು ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಉಲ್ಲೇಖಿಸಿಲ್ಲ ಮತ್ತು ಯಾವುದೇ ಅಭಿವೃದ್ಧಿಪರ ಘೋಷಣೆಗಳನ್ನು ಮಾಡಿಲ್ಲ ಎಂದು ಆರೋಪಿಸಿದ್ದಾರೆ.ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಜಾನುವಾರುಗಳು ಬಲಿಯಾಗುತ್ತಿವೆ, ಮಾನವನ ಮೇಲೂ ದಾಳಿಯಾಗುತ್ತಿದೆ. ಕೃಷಿ ಫಸಲು ನಾಶವಾಗಿ ರೈತಾಪಿ ವರ್ಗ ನಷ್ಟ ಅನುಭವಿಸುತ್ತಿದೆ. ಅಕಾಲಿಕ ಮಳೆಯ ಪರಿಣಾಮ ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದ ಗೊಂದಲ ಇನ್ನೂ ಕೂಡ ಇತ್ಯರ್ಥವಾಗಿಲ್ಲ. ರಾಜ್ಯ ಸರ್ಕಾರದಿಂದ ಪರಿಹಾರವಾಗಬಲ್ಲ ಸಮಸ್ಯೆಗಳು ಜಿಲ್ಲೆಯನ್ನು ಕಾಡುತ್ತಿದ್ದರೂ ಮುಖ್ಯಮಂತ್ರಿಗಳಿಂದ ಸ್ಪಂದನೆ ದೊರೆತ್ತಿಲ್ಲ. ಕನಿಷ್ಠ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುವ ಕಾಳಜಿಯನ್ನು ಕೂಡ ತೋರಿಲ್ಲ.ಮುಖ್ಯಮಂತ್ರಿಯೊಬ್ಬರು ಜಿಲ್ಲೆಗೆ ಆಗಮಿಸಿದರೆ ಹೊಸ ಯೋಜನೆ ಅಥವಾ ವಿಶೇಷ ಅನುದಾನ ಘೋಷಿಸುವ ನಿರೀಕ್ಷೆ ಎಲ್ಲರಲ್ಲಿ ಇರುತ್ತದೆ. ಆದರೆ ಇದ್ಯಾವುದನ್ನೂ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸಕ್ಕೆಂದು ಬಂದು ಹೋದಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಭೇಟಿಯಿಂದ ಕೊಡಗು ಜಿಲ್ಲೆಗೆ ಯಾವುದೇ ರೀತಿಯ ಲಾಭವಾಗಿಲ್ಲ, ಅಭಿವೃದ್ಧಿ ಕಾರ್ಯಗಳ ಕುರಿತು ಆಶಾಭಾವನೆ ಮೂಡಿಲ್ಲ. ಇಬ್ಬರು ಶಾಸಕರು ಕೂಡ ಮುಖ್ಯಮಂತ್ರಿಗಳ ಭೇಟಿಯನ್ನು ಫಲಪ್ರದಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಾಕೇಶ್ ದೇವಯ್ಯ ಟೀಕಿಸಿದ್ದಾರೆ.