ಫೆ. 25ರಂದು ನವಲಗುಂದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನ

| Published : Feb 10 2024, 01:46 AM IST

ಸಾರಾಂಶ

ಫೆ. 2ರಂದು ನವಲಗುಂದಕ್ಕೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಧಾರವಾಡ:ಮುಖ್ಯಮಂತ್ರಿ ಸಿದ್ಧರಾಮಯ್ಯ ಫೆ. 24ರಂದು ನವಲಗುಂದ ಪಟ್ಟಣಕ್ಕೆ ಆಗಮಿಸಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಕಾಮಗಾರಿಗಳ ಕುರಿತು ವರದಿ ಸಲ್ಲಿಸುವಂತೆ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಐದು ಗ್ಯಾರೆಂಟಿಗಳ ಫಲಾನುಭವಿಗಳ ಸಮಾವೇಶವನ್ನು ನವಲಗುಂದ ಪಟ್ಟಣದ ಮಾಡಲ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿಯೇ ಗ್ರಾಮೀಣ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಲು ಚಕ್ಕಡಿ ರಸ್ತೆಗಳನ್ನು ಅಗಲೀಕರಣ ಮಾಡಿ ಹೆದ್ದಾರಿ ತರಹ ಅಭಿವೃದ್ಧಿ ಪಡಿಸಿದ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ವೀಕ್ಷಣೆ ಮಾಡಲಿದ್ದಾರೆ. ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ 41 ಎಕರೆ ಆಶ್ರಯ ಬಡಾವಣೆಯಲ್ಲಿ ಅಂದಾಜು 1 ಸಾವಿರ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ, ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ 19 ಎಕರೆ ಆಶ್ರಯ ಬಡಾವಣೆಯಲ್ಲಿ 350 ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮ, ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಲಗುಂದ ತಾಲೂಕಿನ ಅಳಗವಾಡಿ, ತಡಹಾಳ, ಹಣಸಿ, ಶಿರಕೋಳ, ಅಣ್ಣಿಗೇರಿ ತಾಲೂಕಿನ ನಲವಡಿ, ಅರೇಕುರಹಟ್ಟಿ, ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಮುಂತಾದ ಗ್ರಾಮಗಳಲ್ಲಿ 1 ಸಾವಿರ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದರು.

ನವಲಗುಂದ ನಗರದ ಮಂಜುನಾಥ ನಗರದಲ್ಲಿ ₹60 ಲಕ್ಷ ಅನುದಾನದಲ್ಲಿ ನಿರ್ಮಿಸಿದ ಸಮುದಾಯ ಭವನ, ₹4.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆ, ಹರಳಯ್ಯ ಸಮಾಜದ ಓಣಿಯಲ್ಲಿ ₹60 ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಭವನ, ಸಿದ್ದರಾಮೇಶ್ವರ ನಗರದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಭವನ, ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ ನೂತನವಾಗಿ ನಿರ್ಮಿಸಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ, ಪದವಿ ಕಾಲೇಜುಗಳ 35 ಕೊಠಡಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮ ನಡೆಯಲಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 15ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯೂ ನೆರವೇರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಎರಡು ಫಲಾನುಭವಿಗಳ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಬರುವ ಫೆ. 24ರಂದು ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ರೂಪಿಸಬೇಕು. ತಹಸೀಲ್ದಾರ್‌ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿಧ ಸಮಿತಿಗಳನ್ನು ರಚಿಸಿ, ಕಾರ್ಯ ಹಂಚಿಕೆ ಮಾಡಬೇಕು ಎಂದರು.

ಮಹಾನಗರ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.