ಸಾರಾಂಶ
ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರದಿಂದ ವಂಚಿತರಾಗಿದ್ದರು. ಸಂಸ್ಕೃತ ಕಲಿಯುವುದಕ್ಕೆ ಅವಕಾಶ ಇರಲಿಲ್ಲ
ಕನ್ನಡಪ್ರಭ ವಾರ್ತೆ ಮೈಸೂರು
ಬಸವಣ್ಣ ಕ್ರಾಂತಿ ಪುರುಷ ಮಾತ್ರವಲ್ಲ, ವಿಶ್ವವಿಖ್ಯಾತ ಆರ್ಥಿಕ ತಜ್ಞರೂ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ವೀರಶೈವ- ಲಿಂಗಾಯತ ಸಂಘ ಸಂಸ್ಥೆಗಳು ಶನಿವಾರ ಆಯೋಜಿಸಿದ್ದ ನಮ್ಮ ಬಸವ ಜಯಂತಿ- 2025 ನಮ್ಮ ನಡೆ ಅನುಭವ ಮಂಟಪದ ಕಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾನಾಡಿದರು.ಬಸವಣ್ಣ ಅವರು ಪ್ರತಿಪಾದಿಸಿದ ಕಾಯಕ, ದಾಸೋಹವನ್ನು ಎಲ್ಲರೂ ಪಾಲಿಸಬೇಕು. ಕಾಯಕವೇ ಕೈಲಾಸವನ್ನು ತಮ್ಮ ಬದುಕಿನಲ್ಲಿ ಅವಳಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಸಮಾಜದಲ್ಲಿ ಬಹುಸಂಖ್ಯಾತ ಜನ ಅಕ್ಷರದಿಂದ ವಂಚಿತರಾಗಿದ್ದರು. ಸಂಸ್ಕೃತ ಕಲಿಯುವುದಕ್ಕೆ ಅವಕಾಶ ಇರಲಿಲ್ಲ. ಸಂಸ್ಕೃತ ಮೇಲ್ವರ್ಗದ ಆಸ್ತಿಯಾಗಿತ್ತು. ಶೂದ್ರರು ಅಕ್ಷರ ಕಲಿಯುವುದಕ್ಕೆ ಅವಕಾಶ ಇರಲಿಲ್ಲ. ಬಸವಣ್ಣ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ವಿರುದ್ಧ, ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಟ ಮಾಡಿ, ನಾವೆಲ್ಲರೂ ಮನುಷ್ಯರಾಗಿ ಬಾಳಬೇಕೆಂದು ಪ್ರತಿಪಾದಿಸಿದ ಕ್ರಾಂತಿ ಪುರುಷ. ಆದರೆ, ಇನ್ನೂ ಕೂಡ ಜಾತಿ ಹೋಗಿಲ್ಲ. ಅಸಮಾನತೆ ಜೀವಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಬಸವಾದಿ ಶರಣರು ನುಡಿದಂತೆ ನಡೆದರು. ನುಡಿದಂತೆ ನಡೆಯುವುದು ಬಹಳ ಮುಖ್ಯ. ಪ್ರಾಮಾಣಿಕವಾಗಿ ಬದುಕಿದರು. ಜಾತಿ ರಹಿತ ವರ್ಗ ರಹಿತ ಸಮಾನತೆಯಿಂದ ಕೂಡಿದ ಸಮಾಜಕ್ಕಾಗಿ ಶ್ರಮಿಸಿದರು. ಶರಣರ ಅನುಭಾವದ ಮಾತುಗಳೇ ವಚನಗಳಾಗಿವೆ. ವಚನ ಮತ್ತು ದಾಸ ಸಾಹಿತ್ಯವೂ ಕನ್ನಡ ಸಾಹಿತ್ಯದ ಮೈಲಿಗಲ್ಲು ಎಂದರು.ಬಸವಣ್ಣರನ್ನು ಎಲ್ಲಾ ಸಮಾಜದವರು ಪೂಜಿಸಬೇಕು, ಗೌರವಿಸಬೇಕು ಮತ್ತು ಜಯಂತಿ ಆಚರಿಸಬೇಕು. ಒಂದು ಜನಾಂಗಕ್ಕೆ ಸೀಮಿತ ಮಾಡಬಾರದು. ಪರಸ್ಪರ ಪ್ರೀತಿ ಮತ್ತು ಪರಸ್ಪರ ಗೌರವಿಸಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಯಾವುದೇ ಜಾತಿ, ವರ್ಗ ಇಲ್ಲದ ಸಮ ಸಮಾಜ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.ಅನುಭವ ಮಂಟಪ ಅವತ್ತಿನ ಸಂಸತ್ ಭವನ. ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತು. ಪುರುಷ ಮಹಿಳೆ ಎಂಬ ವ್ಯತ್ಯಾಸ ಇರಲಿಲ್ಲ. ಎಲ್ಲಾ ಜಾತಿಯ ಜನರು ಇರುತ್ತಿದ್ದರು. ಅಭಿಪ್ರಾಯ ಹೇಳಲು ಮುಕ್ತ ಅವಕಾಶ ಇತ್ತು. ವೃತ್ತಿಯ ಆಧಾರದಲ್ಲಿ ಮೇಲು ಕೀಳು ಇಲ್ಲ. ಕಸ ಗುಡಿಸುವವನು, ರಾಷ್ಟ್ರಪತಿ ವೃತ್ತಿಯೂ ಒಂದೇ ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ರಹೀಂ ಖಾನ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ಶಾಸಕ ಪೊನ್ನಣ್ಣ, ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಎಚ್.ಎಸ್. ಗಣೇಶಪ್ರಸಾದ್, ದರ್ಶನ್ ಧ್ರುವನಾರಾಯಣ, ಟಿ.ಎಸ್. ಶ್ರೀವತ್ಸ, ಡಿ. ರವಿಶಂಕರ್, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು, ಬಸವ ಜಯಂತಿ- 2025ರ ಅಧ್ಯಕ್ಷ ನಾಗರಾಜು ಬ್ಯಾತಹಳ್ಳಿ ಮೊದಲಾದವರು ಇದ್ದರು.----ಬಾಕ್ಸ್.... ಬಸವ ಭವನಕ್ಕೆ ಸರ್ಕಾರದಿಂದ ಅನುದಾನಮೈಸೂರಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಬಸವ ಭವನಕ್ಕೆ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಮೈಸೂರಿನ ಜೆಎಸ್ಎಸ್ ಶಿಕ್ಷಕರ ಬಡಾವಣೆಯಲ್ಲಿ ಬಸವ ಭವನ ನಿರ್ಮಾಣಕ್ಕೆ 15 ಕೋಟಿ ರೂ. ವೆಚ್ಚವಾಗಲಿದೆ. ಬಸವ ಬಳಗಗಳ ಒಕ್ಕೂಟದಿಂದ 5 ಕೋಟಿ ಭರಿಸಲಿದೆ. ಶಾಸಕ ತನ್ವೀರ್ ಸೇಠ್ ಅವರು ತಮ್ಮ ಪ್ರದೇಶಾಭಿವೃದ್ಧಿಯಿಂದ 1 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಅನುದಾನ ನೀಡುವಂತೆ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು ಮನವಿ ಸಲ್ಲಿಸಿದರು.ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಬಸವ ಭವನಕ್ಕೆ ಸರ್ಕಾರದಿಂದ ನೀವು ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಹೇಳಿದರು. ----ಕೋಟ್...12ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಆಶಯಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿದ್ದಾರೆ. ಡಾ. ಅಂಬೇಡ್ಕರ್ ಅವರು ಬಸವಣ್ಣರ ಬಗ್ಗೆ ಓದಿಕೊಂಡಿದ್ದರು ಅನಿಸುತ್ತದೆ. ಹೀಗಾಗಿ, ಬಸವಣ್ಣ ಪ್ರತಿಪಾದಿಸಿದ ಆಶಯಗಳು ಸಂವಿಧಾನದಲ್ಲಿವೆ. ಓದು ಬರಹ ಬಲ್ಲ ಪ್ರತಿಯೊಬ್ಬರೂ ಸಂವಿಧಾನ ಓದಬೇಕು. ಸಂವಿಧಾನ ಉಳಿಸಿ ಗೌರವಿಸಿ ರಕ್ಷಿಸಬೇಕು. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ