ಸಾರಾಂಶ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ ಮತ್ತು ನಾಸ್ತಿಕವಾದಿ. ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡುವ ಮೂಲಕ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೂ ಕೇರಳ ಸರ್ಕಾರಕ್ಕೂ ಏನು ಸಂಬಂಧ? ದೇಶದ್ರೋಹಿ ಎಸ್‌ಡಿಪಿಐ ಧರ್ಮಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದು ಯಾಕೆ? ಇದನ್ನೆಲ್ಲ ಗಮನಿಸಿದರೆ ಧರ್ಮಸ್ಥಳ ವಿಚಾರದಲ್ಲಿ ಎಡಪಂಥೀಯರು ವ್ಯವಸ್ಥಿತವಾಗಿ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೇ ಸಿದ್ದರಾಮಯ್ಯ ಅವರಿಗೆ ಈ ಕುರಿತು ಕಪಾಳಕ್ಕೆ ಹೊಡೆದ ರೀತಿಯಲ್ಲಿ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಕ್ರೌರ್ಯ ಮೆರೆದವರ ಮೇಲೆ ಕ್ರಮ ಆಗಬೇಕು. ನಾವೂ ಇದಕ್ಕೆ ಬದ್ಧರಾಗಿದ್ದೇವೆ. ಆದರೆ, ಸುಖಾಸುಮ್ಮನೆ ಧರ್ಮಸ್ಥಳ ದೇವಸ್ಥಾನ ಮತ್ತು ಧರ್ಮಾಧಿಕಾರಿಗಳ ಮತ್ತು ಅವರ ಕುಟುಂಬದವರ ಮೇಲೆ ಆರೋಪ ಮಾಡಲಾಗುತ್ತಿದೆ. ಇದು ಖಂಡನೀಯ ಎಂದರು.ಬುರುಡೆ ಹಿಡಿದುಕೊಂಡು ಬಂದ ಅನಾಮಿಕ ವ್ಯಕ್ತಿ ಹೇಳಿದಂತೆ ಹಲವೆಡೆ ಅಗೆದರೂ ಏನು ಸಿಕ್ಕಿಲ್ಲ. ಹೀಗಾಗಿ, ಅನಾಮಿಕನನ್ನು ಬಂಧಿಸಬೇಕು.ಒದ್ದು ಒಳಗಡೆ ಹಾಕಬೇಕು ಎಂದು ಮುತಾಲಿಕ ಆಗ್ರಹಿಸಿದರು.
ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಕೊಪ್ಪಳದಲ್ಲಿ ಹಿಂದೂ ಯುವಕನನ್ನು ಭೀಕರ ಕೊಲೆ ಮಾಡಲಾಗಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿ ಮಾಡಿದರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ನಾವು ದೇವಸ್ಥಾನದ ಮುಂದೆ ಕೊಲೆ ಮಾಡಬೇಕೇ? ಹಿಂದೂ ಯುವಕರ ಕೊಲೆ ಇದೆಲ್ಲವೂ ಕಾಂಗ್ರೆಸ್ ಸರ್ಕಾರ ಕೃಪಾಪೋಷಿತ. ಮುಸ್ಲಿಂ ಧರ್ಮ ಗುರುಗಳು ಮತ್ತು ಜಮೀರ ಅಹಮದ್ ಅವರೇ ಬಾಯಲ್ಲಿ ಏನೂ ಇಟ್ಟುಕೊಂಡಿದ್ದೀರಿ? ಯಾಕೆ ಈ ಕುರಿತು ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ಕೊಡುತ್ತೇನೆ ಎಂದಿರುವ ಯತ್ನಾಳ ಹೇಳಿಕೆ ಸರಿ ಇದೆ. ಯತ್ನಾಳ ಐದು ಲಕ್ಷ ಕೊಟ್ಟರೆ ನಾವು ಮದುವೆ ಮಾಡಿಸಿ, ಕೆಲಸ ಕೊಡಿಸ್ತೀವಿ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಜು ಕಾಟ್ಕರ್, ಅಣ್ಣಪ್ಪ ದಿವಟಗಿ, ಬಸರಾಜ ಗೌಡರ, ಮಹಾಂತೇಶ ಟೊಂಗಳಿ, ಬಸು ದುರ್ಗದ, ಗುಣಧರ ದಢೋತಿ ಸೇರಿದಂತೆ ಹಲವರಿದ್ದರು.ಹಲಾಲ್ ಮುಕ್ತ ಹಬ್ಬ ಮಾಡಿ: ಹಿಂದೂಗಳು ಗಣೇಶೋತ್ಸವನ್ನು ಹಲಾಲ್ ಮುಕ್ತ ಮಾಡಬೇಕು. ಹಬ್ಬದಲ್ಲಿ ಧರ್ಮ ಕೇಳಿ ವ್ಯಾಪಾರ ವಹಿವಾಟು ಮಾಡಿ. ಧರ್ಮ ಕೇಳಿ ಪಹಲ್ಗಾಮ್‌ನಲ್ಲಿ ನಮ್ಮವರನ್ನು ಭೀಕರ ಕೊಲೆ ಮಾಡಲಾಗಿದೆ. ಹಲಾಲ್ ಇದ್ದ ವಸ್ತುಗಳನ್ನು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರುದ್ಧ ಆಗುತ್ತದೆ. ಧರ್ಮದ ಆಧಾರದ ಮೇಲೆ ಗಣೇಶ ಹಬ್ಬ ಆಗಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.