ಸಾರಾಂಶ
ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುವ ಮೊಂಡುತನ ಪ್ರದರ್ಶಿಸಬಾರದು. ಅವರು ಸಾಚಾ ಆಗಿದ್ದರೆ ರಾಜೀನಾಮೆ ನೀಡಲಿ. ಮೊದಲು ರಾಜೀನಾಮೆ ಕೊಟ್ಟು ನಂತರ ಅವರು ತನಿಖೆ ಎದುರಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ಹೊಸಪೇಟೆ: ಈಗ ಹೈಕೋರ್ಟ್ ತೀರ್ಪು ಹೊರ ಬಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುವ ಮೊಂಡುತನ ಪ್ರದರ್ಶಿಸಬಾರದು. ಅವರು ಸಾಚಾ ಆಗಿದ್ದರೆ ರಾಜೀನಾಮೆ ನೀಡಲಿ. ಮೊದಲು ರಾಜೀನಾಮೆ ಕೊಟ್ಟು ನಂತರ ಅವರು ತನಿಖೆ ಎದುರಿಸಬೇಕು. ಅಧಿಕಾರದಲ್ಲಿದ್ದುಕೊಂಡು ತನಿಖೆ ಎದುರಿಸಿದರೆ, ಅದು ನ್ಯಾಯಸಮ್ಮತವಾಗಲ್ಲ ಎಂದರು.ಮುಡಾ ಹಗರಣ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಿತ್ತು. ಪಾದಯಾತ್ರೆ ಮಾಡಿತ್ತು. ಹೈಕೋರ್ಟ್ ನಿರ್ಧಾರದಿಂದ ಬಿಜೆಪಿಗೆ ದೊಡ್ಡ ಜಯ ಸಿಕ್ಕಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಡವರು ಮತ್ತು ದಲಿತರಿಗೆ ಮೀಸಲಾದ ಭೂಮಿಯನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಂಡಿರುವ ಭೂಗಳ್ಳರಿಗೆ ಇದು ಎಚ್ಚರಿಕೆಯಾಗಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದು ನ್ಯಾಯೋಚಿತವಲ್ಲ. ಬಿಜೆಪಿಗೆ ರಾಜ್ಯ ಸರ್ಕಾರ ಬೀಳಿಸುವ ಯಾವ ಉದ್ದೇಶ ಇಲ್ಲ. ಇಷ್ಟೆಲ್ಲ ಆದರೂ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯಬಾರದು. ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಬಲ್ಲಾಹುಣ್ಣಿ ರಾಮಣ್ಣ, ರಾಘವೇಂದ್ರ, ಕೃಷ್ಣ ನಾಯ್ಕ, ಕಿಚಿಡಿ ಕೊಟ್ರೇಶ್ ಮತ್ತಿತರರಿದ್ದರು.