ನಾಳೆ ದೊಡ್ಡಬಾಲ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

| Published : Apr 21 2025, 12:50 AM IST

ಸಾರಾಂಶ

ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹೋಮ ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್‍ಯಗಳು ಜರುಗಲಿವೆ. ಏ.21ರಂದು ಸಂಜೆ ಆಸುಪಾಸಿನ ವಿವಿಧ ಗ್ರಾಮಗಳಿಂದ ಆಗಮಿಸುವ 14 ಕೂಟದ ದೇವರುಗಳಿಗೆ ಗ್ರಾಮಸ್ಥರು ಧೂಪಾರತಿ ಮತ್ತು ಮಂಗಳವಾದ್ಯದೊಂದಿಗೆ ಅದ್ಧೂರಿ ಸ್ವಾಗತ ಕೋರುವರು.

ಕನ್ನಡಪ್ರಭ ವಾರ್ತೆ ನಾಗಮಂಗಲ

39 ವರ್ಷಗಳ ಬಳಿಕ ತಾಲೂಕಿನ ದೊಡ್ಡಾಬಾಲ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಹುಚ್ಚಪ್ಪಸ್ವಾಮಿ ಹಾಗೂ 14 ಕೂಟಗಳ ದೇವರ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಡೀ ಗ್ರಾಮ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹೋಮ ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್‍ಯಗಳು ಜರುಗಲಿವೆ. ಏ.21ರಂದು ಸಂಜೆ ಆಸುಪಾಸಿನ ವಿವಿಧ ಗ್ರಾಮಗಳಿಂದ ಆಗಮಿಸುವ 14 ಕೂಟದ ದೇವರುಗಳಿಗೆ ಗ್ರಾಮಸ್ಥರು ಧೂಪಾರತಿ ಮತ್ತು ಮಂಗಳವಾದ್ಯದೊಂದಿಗೆ ಅದ್ಧೂರಿ ಸ್ವಾಗತ ಕೋರುವರು.

ನಂತರ ಇಡೀ ರಾತ್ರಿ ಬಾಯಿಬೀಗ ಸೇವೆ, ನಂದಿಧ್ವಜ ಕುಣಿತ, ಹಲಗೆ ಕುಣಿತ, ಮದ್ದುಗುಂಡುಗಳ ಪ್ರದರ್ಶನ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ.

ಏ.22ರ ಮುಂಜಾನೆ 4 ಗಂಟೆಗೆ ಗಂಗಾಸ್ನಾನ, ಹೂ ಹೊಂಬಾಳೆಧಾರಣೆ ಬಳಿಕ ಕೊಂಡೋತ್ಸವ ನಡೆಯಲಿದೆ. ಶ್ರೀ ಹುಚ್ಚಪ್ಪಸ್ವಾಮಿ ಅವರ ಬೀಡಿಕೆ ಉತ್ಸವ (ರಾಶಿ ಪೂಜೆ) ನಂತರ ದೇವರ ಮೂಲವಿಗ್ರಹಕ್ಕೆ ಅಭಿಷೇಕ ಮಹಾ ಮಂಗಳಾರತಿ, ಮುಡಿಸೇವೆ ಜರುಗಲಿದೆ.

ಏ.23ರಂದು ಹುಚ್ಚಪ್ಪಸ್ವಾಮಿ ದೇವಸ್ಥಾನದಿಂದ 14 ಕೂಟದ ದೇವರುಗಳ ಉತ್ಸವ ಹೊರಟು ಬನ್ನಿ ಮಂಟಪ ತಲುಪಲಿದೆ. ಹಣ್ಣು ತುಪ್ಪ ಸೇವೆ, ಶಿವಪೂಜೆ, ಕಲ್ಯಾಣಿಯಲ್ಲಿ ಗಂಗಾಸ್ನಾನ, ಎದುರಾರತಿ ನಂತರ 14 ಕೂಟದ ದೇವರುಗಳನ್ನು ಆಯಾ ಗ್ರಾಮಗಳಿಗೆ ಬೀಳ್ಕೊಡಲಾಗುವುದು.

ಸಿಎಂ ಸೇರಿ ಗಣ್ಯರು ಭಾಗಿ:

ಏ.22ರಂದು ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮತ್ತು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಸೇರಿದಂತೆ ಹಲವು ಅಧಿಕಾರಿಗಳು ಭಾನುವಾರ ಗ್ರಾಮಕ್ಕೆ ಭೇಟಿ ಕೊಟ್ಟು ಸಮಾರಂಭ ನಡೆಯುವ ವೇದಿಕೆ ಮತ್ತು ಮುಖ್ಯಮಂತ್ರಿಗಳು ಬಂದಿಳಿಯುವ ತಾತ್ಕಾಲಿಕ ಹೆಲಿಪ್ಯಾಡ್‌ನ ಸ್ಥಳ ಪರಿಶೀಲನೆ, ಭದ್ರತೆ ಕುರಿತು ನಡೆಸಿದರು.

ಜಾತ್ರಾ ಮಹೋತ್ಸವದಲ್ಲಿ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 50ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ಸಾರ್ವಜನಿಕರು ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಬೃಹತ್ ವೇದಿಕೆ ಮತ್ತು ಪೆಂಡಾಲ್ ನಿರ್ಮಿಸಿ ಜನರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಮತ್ತು ಸಾರ್ವಜನಿಕರಿಗೆ ಗ್ರಾಮಸ್ಥರು ದೇವರ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಆಯೋಜಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಮತ್ತು ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ದೊಡ್ಡಾಬಾಲ ಗ್ರಾಮದ ವರೆಗೆ ರಸ್ತೆಬದಿಯಲ್ಲಿ ಸ್ವಾಗತ ಕೋರುವ ಕಟೌಟ್‌ಗಳು ರಾರಾಜಿಸುತ್ತಿವೆ. ಇಡೀ ಗ್ರಾಮವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿದೆ.

ಮೇ 2 ರಂದು ಅಲ್ಲಾಪಟ್ಟಣಕ್ಕೆ ಸಿಎಂ ಆಗಮನ: ರಮೇಶ ಬಂಡಿಸಿದ್ದೇಗೌಡ

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಅಲ್ಲಾಪಟ್ಟಣ ಗ್ರಾಮಕ್ಕೆ ಮೇ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ.ಪಟ್ಟಣದಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ಮೇ 2ರಂದು ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಬೀರೇಶ್ವರ (ಅನ್ನದಾನೇಶ್ವರ) ದೇವಾಲಯವನ್ನು ಲೋಕಾರ್ಪಣೆಗೊಳಿಸಲು ಮುಖ್ಯಮಂತ್ರಿಗಳು ಕುಟುಂಬ ಸಮೇತ ಆಗಮಿಸಲಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ದೇವರು ಅನ್ನದಾನೇಶ್ವಸ್ವಾಮಿ ಆಗಿರುವುದರಿಂದ ಅವರು ಇಲ್ಲಿಗೆ ಬಂದು ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೋಗುವ ರಸ್ತೆಯನ್ನು ಈಗಾಗಲೇ 3 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ದೇವಾಲಯದ ಆವರಣದಲ್ಲಿ ಸ್ವಚ್ಛತೆ, ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ, ಬರುವ ಜನರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಸಿದ್ದತೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕಾರ್ಯಕ್ರಮದಲ್ಲಿ ಸರ್ಕಾರದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.