ಕೆ.ಸಾಲುಂಡಿಗೆ ಮುಖ್ಯಂತ್ರಿ ಸಿದ್ದರಾಮಯ್ಯ ಭೇಟಿ; ಸಾಂತ್ವನ

| Published : May 24 2024, 12:51 AM IST

ಸಾರಾಂಶ

ಕಲುಷಿತ ನೀರು ಸೇವಿಸಿ ಮೃತಪಟ್ಟ ಕೆ. ಸಾಲುಂಡಿಯ ಕನಕರಾಜು ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಮೃತ ಕನಕರಾಜು ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಅವರ ಸಹೋದರ ರವಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಕಲುಷಿತ ನೀರು ಸೇವಿಸಿ ಮೃತಪಟ್ಟ ಕೆ. ಸಾಲುಂಡಿಯ ಕನಕರಾಜು ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮೃತ ಕನಕರಾಜು ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಅವರ ಸಹೋದರ ರವಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು.

ಕಲುಷಿತ ನೀರು ಸೇವಿಸಿ ಮೃತ ಕನಕರಾಜು ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧಿಸಿದಾಗಲೆಲ್ಲ ಈ ಊರಿನಲ್ಲಿ ನೂರಕ್ಕೆ ನೂರು ವೋಟು ಹಾಕುತ್ತಿದ್ದರು. ಈ ಗ್ರಾಮ ಬೋಗಾದಿ ಪಟ್ಟಣ ಪಂಚಾಯಿತಿಗೆ ಬರುತ್ತದೆ. ಅಧಿಕಾರಿಗಳ ತಪ್ಪಿನಿಂದ ಕಲುಷಿತ ನೀರು ಕುಡಿದು ಕಾಲರಾ ಹರಡಿದೆ ಎಂದು ಅವರು ಹೇಳಿದರು.

ಅವರ ಕುಟುಂಬದ ಪೋಷಕರು, ಅಣ್ಣನಿಗೆ ದೇವರು ಸಾವಿಗೆ ದುಖ ಭರಿಸುವ ಶಕ್ತಿ ನೀಡಲಿ, ಆತ್ಮಕ್ಕೆ ಶಾಂತಿ ನೀಡಲಿ ಎಂದು ಕೋರುತ್ತೇನೆ.

ಕಲುಷಿತ ನೀರು ಪೂರೈಕೆ ಕುರಿತು ವರದಿ ಬಂದಿದೆ. ಕುಡಿಯುವ ನೀರಿನಲ್ಲಿರುವ ತೊಡಕು ಪರಿಹರಿಸಲಾಗುವುದು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಟ್ಯಾಂಕ್‌ಗಳನ್ನು ಶುಚಿಗೊಳಿಸಲಾಗಿದೆ. ಮುಂದೆ ಹೀಗೆ ನಡೆದರೆ ಜಿಪಂ ಸಿಇಒನೇ ಅಮಾನತು ಮಾಡಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಬಳಿಕ ಸಿದ್ದರಾಮಯ್ಯ ಅವರು, ಕೆ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ಕಾಳೇಗೌಡ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಕೆ. ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಎಂಡಿಎ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಪಂ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಮೊದಲಾದವರು ಇದ್ದರು.