ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ, ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ರಾಜಕಾರಣಿಗಳು, ಸಿನಿಮಾ ನಟರು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಡಿ.ವಿ.ಸದಾನಂದಗೌಡ, ಸಂಸದ ಡಾ। ಸಿ.ಎನ್.ಮಂಜುನಾಥ, ಶಾಸಕರಾದ ಡಾ। ಸಿ.ಎನ್.ಅಶ್ವತ್ಥನಾರಾಯಣ, ತನ್ವೀರ್ ಸೇಠ್, ಮಾಜಿ ಸಚಿವರಾದ ನಫೀಜಾ ಫಜಲ್, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಪುಟ್ಟರಾಜು, ಅರವಿಂದ ಲಿಂಬಾವಳಿ, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಮಾಜಿ ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಅವಧೂತ ವಿನಯ್ ಗುರೂಜಿ, ಭಾನುಪ್ರಕಾಶ್ ಶರ್ಮಾ, ತೇಜಸ್ವಿನಿ ಅನಂತಕುಮಾರ್, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಕೃಷ್ಣ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಚಿತ್ರರಂಗದಿಂದ ನಟಿ ರಮ್ಯಾ, ಅಶ್ವಿನಿ ಪುನೀತ್ ರಾಜಕುಮಾರ್, ನಟ ಶ್ರೀನಾಥ, ನಟಿ ತಾರಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತಿತರರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಕ್ರೀಡಾಪಟುಗಳ ಪಾಲಿಗೆ ಅವರು ಕುಟುಂಬದಂತೆ ಇದ್ದರು. ನಾಡಿನ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡಿರುವುದು ನಾಡಿಗೆ ಬಹುದೊಡ್ಡ ನಷ್ಟ ಎಂದು ಬಣ್ಣಿಸಿದರು.ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು: ಡಾ। ಸತ್ಯನಾರಾಯಣವಯೋಸಹಜ ಆರೋಗ್ಯ ವಿಚಾರಗಳಿಂದ ಅವರು ನಿಧನರಾದರು ಎಂದು ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯ ಸತ್ಯನಾರಾಯಣ ಹೇಳಿದ್ದಾರೆ.ಅನೇಕ ದಿನಗಳಿಂದ ಅವರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದರು. ತೀವ್ರ ಸ್ವರೂಪದ ಚಿಕಿತ್ಸೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಸರಳ ವ್ಯಕ್ತಿತ್ವ ಇತ್ತು. ಆರೋಗ್ಯ ಸುಧಾರಣೆ ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಬೇಕು ಎನ್ನುತ್ತಿದ್ದರು ಎಂದು ಅವರು ತಿಳಿಸಿದರು.