ಸಾರಾಂಶ
ಹೊನ್ನಾವರ: ಬಂದರು ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗೆ ರಾಷ್ಟ್ರೀಯ ಮೀನುಗಾರ ಕಾರ್ಮಿಕರ ವೇದಿಕೆಯ ಅಧ್ಯಕ್ಷ ರಾಮಕೃಷ್ಣ ತಾಂಡೇಲ ಆಗ್ರಹಿಸಿದ್ದಾರೆ.ಮೀನುಗಾರರ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದರು. ಈ ವೇಲೆ ಮಾತನಾಡಿದ ತಾಂಡೇಲ, ಜಿಲ್ಲೆಯ ಪರಿಸರ, ಜನಸಾಮಾನ್ಯರ ಹಿತ ಕಡೆಗಣಿಸಿ, ಸಾಂಪ್ರದಾಯಿಕ ಮೀನುಗಾರಿಕೆ, ಮೀನುಗಾರರ ಜೀವನೋಪಾಯ, ವಸತಿ ನೆಲೆಗಳಿಗೆ ಆತಂಕ ಆಗುವಂತೆ ಜಿಲ್ಲೆಯ ಕರಾವಳಿಯ ಧಾರಣಾ ಸಾಮರ್ಥ್ಯ ಮೀರಿ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ, ಅಂಕೋಲೆಯ ಕೇಣಿಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ಮೂಲದ ವಾಣಿಜ್ಯ ಬಂದರು ನಿರ್ಮಾಣ ಯೋಜನೆ, ಕಾರವಾರದ ಬಂದರನ್ನು ರವೀಂದ್ರನಾಥ ಠಾಗೋರ ಕಡಲತೀರದವರೆಗೆ ವಿಸ್ತರಣೆ ಮಾಡುವ ಸರ್ಕಾರದ ಅವೈಜ್ಞಾನಿಕ ಪರಿಸರ ವಿರೋದಿ ಧೋರಣೆಯನ್ನು ಕೈಬಿಡುವಂತೆ ಆಗ್ರಹಿಸಿದರು.
ಸಭೆ ನಡೆಸಿದ ಮುಖ್ಯಮಂತ್ರಿ ಅಹವಾಲು ಸ್ವೀಕರಿಸಿ ಮಾತನಾಡಿ, ಮೀನುಗಾರರ ಬೇಡಿಕೆಗಳು ಮನವರಿಕೆಯಾಗಿದೆ. ಬಂದರು ವಿರೋಧಿ ಹೋರಾಟದಲ್ಲಿ ಹಿಂದೆ ಮುಂಚೂಣಿಯಲ್ಲಿದ್ದ ಅಂದಿನ ಶಾಸಕ ಮಂಕಾಳ ವೈದ್ಯರೇ ಬಂದರು ಖಾತೆ ಸಚಿವರಾಗಿದ್ದಾರೆ. ಅವರನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತೇನೆ. ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದು, ಸಾದ್ಯವಾದರೆ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದರು.ಮೀನುಗಾರರ ಜೀವನೋಪಾಯಕ್ಕೆ ಮತ್ತು ಮೀನುಗಾರರ ಪರಂಪರಾಗತ ವಸತಿ ನೆಲೆಗಳಿಗೆ ಆತಂಕ ಆಗುವಂತೆ ಪೊಲೀಸ್ ಬಲಪ್ರಯೋಗದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರು ನಿರ್ಮಿಸುವ ಅವೈಜ್ಞಾನಿಕ ಜನವಿರೋಧಿ ಕ್ರಮವನ್ನು ತಡೆಯಲು ಮತ್ತು ಅಮಾಯಕ ಬಡ ಮೀನುಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸಿರುವ ಮತ್ತು ದೌರ್ಜನ್ಯ ಎಸಗಿದ ಬಗ್ಗೆ ಚರ್ಚಿಸಲಾಯಿತು.
ಜಿಲ್ಲೆಯ ಕಾರವಾರ ಮತ್ತು ಬೇಲೆಕೇರಿಗಳಲ್ಲಿ ಪ್ರಸ್ತುತ ಎರಡು ಪ್ರಮುಖ ವಾಣಿಜ್ಯ ಬಂದರುಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಅವು ಹೊಂದಿರುವ ಈ ವರೆಗಿನ ಒಟ್ಟು ಗುರಿಯಲ್ಲಿ ಪ್ರತಿಶತ 40ರಷ್ಟು ಗುರಿ ತಲುಪಲು ಸಹ ಅವುಗಳಿಗೆ ಈವರೆಗೆ ಸಾಧ್ಯವಾಗಿಲ್ಲ ಎಂದರು.ಈ ಎರಡೂ ಬಂದರುಗಳಿಂದ ಮುಂದಿನ 200 ವರ್ಷಗಳವರೆಗೆ ರಾಜ್ಯದ ಅಗತ್ಯವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವುದು ತಜ್ಞರ ಅಭಿಪ್ರಾಯ. ಧಾರಣಾಸಾಮರ್ಥ್ಯವನ್ನು ಮೀರಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಸರ್ಕಾರ ಮತ್ತು ಸ್ಥಳಿಯ ಆಡಳಿತವು ಖಾಸಗಿ ಸಹಭಾಗಿತ್ವದಲ್ಲಿ ಯತ್ನಿಸುತ್ತಿರುವುದು ಸರಿಯಲ್ಲ. ಇದು ತೀರಾ ಅವೈಜ್ಞಾನಿಕ, ಅವಾಸ್ತವಿಕ ಮತ್ತು ಅತ್ಯಂತ ಅಪಾಯಕಾರಿ ಜನವಿರೋಧಿ ನೀತಿಯಾಗಿದೆ ಎಂದು ನಿಯೋಗ ಸಿಎಂಗೆ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಅಲೆನ್ಸಿಯೋ ಸಿಮೋಯಿಸ್, ಸಂಯೋಜಕ ವಿಕಾಸ ತಾಂಡೇಲ, ಉಜ್ವಲಾ ಪಾಟೀಲ, ಲಕ್ಷ್ಮಿ ಟಿ., ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಕಾಸರಕೋಡ ಟೊಂಕದ ಬಂದರು ವಿರೋಧಿ ಹೋರಾಟ ಸಮೀತಿಯ ರಾಜೇಶ ತಾಂಡೇಲ, ಗಣಪತಿ ತಾಂಡೇಲ, ರಿಜ್ವಾನ ಮೈದಿನಸಾಬ, ಅನ್ಸಾರ ಇಸ್ಮಾಯಿಲ್ ಸಾಬ, ರಾಜು ಈಶ್ವರ ತಾಂಡೇಲ, ಅಂಕೋಲಾ ಕೇಣಿಯ ಬಂದರು ವಿರೋಧಿ ಹೋರಾಟ ಸಮಿತಿಯ ಸಂಜೀವ ಬಲೇಗಾರ, ಜ್ಞಾನೇಶ್ವರ, ಗಿರೀಶ ಹರಿಕಂತ್ರ, ಉ.ಕ. ಮೀನುಗಾರರ ಫೇಡರೇಷನ್ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.