ಚಿಗಳ್ಳಿಯ ದೀಪನಾಥೇಶ್ವರ ದೇಗುಲ ಜೋತಿರ್ಲಿಂಗದಷ್ಟೇ ಪವಿತ್ರ: ಸಚ್ಚಿದಾನಂದ ಶ್ರೀ

| Published : May 09 2025, 12:40 AM IST

ಚಿಗಳ್ಳಿಯ ದೀಪನಾಥೇಶ್ವರ ದೇಗುಲ ಜೋತಿರ್ಲಿಂಗದಷ್ಟೇ ಪವಿತ್ರ: ಸಚ್ಚಿದಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಚಿಗಳ್ಳಿಯ ದೀಪನಾಥೇಶ್ವರ ದೇಗುಲ ಜೋತಿರ್ಲಿಂಗದಷ್ಟೇ ಪವಿತ್ರವಾಗಿದೆ.

ಮುಂಡಗೋಡ: ಚಿಗಳ್ಳಿಯ ದೀಪನಾಥೇಶ್ವರ ದೇಗುಲ ಜೋತಿರ್ಲಿಂಗದಷ್ಟೇ ಪವಿತ್ರವಾಗಿದೆ ಎಂದು ಹೊನ್ನಾವರ ಕರ್ಕಿ ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ತೀರ್ಥರು ಹೇಳಿದರು.

ಬುಧವಾರ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಭಗವಂತ ಯಾವಾಗ ಎಲ್ಲಿ ಯಾರಿಗೆ ಅನುಗ್ರಹಿಸುತ್ತಾನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಎಲ್ಲಿ ಭಕ್ತಿಯಿಂದ ಆಹ್ವಾನಿಸಿ ಆಮಂತ್ರಿಸಲಾಗುತ್ತದೆ. ಅಲ್ಲಿ ಮಾತ್ರ ಅನುಗ್ರಹಿಸುತ್ತಾನೆ. ಹಾಗೆಯೇ ಶಾರದಮ್ಮನವರ ಭಕ್ತಿಗೆ ಮೆಚ್ಚಿ ಬ್ರಹ್ಮ, ವಿಷ್ಣು, ಮಹೇಶ್ವರರು ದೀಪಗಳ ರೂಪದಲ್ಲಿ ಚಿಗಳ್ಳಿ ಗ್ರಾಮದಲ್ಲಿ ನೆಲೆಸಿ ೪೫ ವರ್ಷಗಳ ಕಾಲ ಸೇವೆ ಸ್ವೀಕರಿಸಿದ್ದಾರೆ ಎಂದರು.

ಶಾರದಾಬಾಯಿ ದೈವಜ್ಞ ಮಾತೆಯ ಮನಸ್ಸಿನ ಇಚ್ಚೆ ಹಾಗೂ ಸಂಕಲ್ಪದಂತೆ ಎಣ್ಣೆ ಇಲ್ಲದೇ ೪೫ ವರ್ಷಗಳ ದೀಪ ಉರಿದಿರುವುದು ಸಾಮಾನ್ಯವಲ್ಲ. ಈ ಸ್ಥಳದ ಶಕ್ತಿ ಅಪಾರವಾಗಿದೆ. ದೀಪ ಶಾಂತವಾದರೂ ದೀಪಗಳು ಉರಿಯುತ್ತಿದ್ದ ಪವಿತ್ರವಾದ ಸ್ಥಳದ ಶಕ್ತಿ ಯಾವತ್ತೂ ಕಡಿಮೆಯಾಗುವುದಿಲ್ಲ. ಭಾರತದ ಪ್ರಸಿದ್ಧ ಜೋತಿರ್ಲಿಂಗ ನೋಡಲು ಹೋಗುತ್ತೇವೆ. ಜ್ಯೋತಿ ಸ್ವರೂಪವಾಗಿ ಅಲ್ಲಿ ನೆಲೆಸಿದ್ದ ಎಂಬುವುದನ್ನು ನಾವು ಕೇಳಿದ್ದೇವೆ. ಆದರೆ ಅಲ್ಲಿ ಜ್ಯೋತಿಗಳು ಕಾಣುವುದಿಲ್ಲ. ಬದಲಾಗಿ ಲಿಂಗಗಳು ಮಾತ್ರ ಕಾಣುತ್ತವೆ. ಪರಮಾತ್ಮ ಜ್ಯೋತಿ ಸ್ವರೂಪವಾಗಿ ನಿಂತು ಹೋದ ಆ ಸ್ಥಳ ಹೇಗೆ ಪವಿತ್ರವೋ ಹಾಗೆಯೇ ೪೫ ವರ್ಷಗಳ ಕಾಲ ದೀಪದ ಮೂಲಕ ವಾಸವಾಗಿದ್ದ ಚಿಗಳ್ಳಿಯ ಈ ಸ್ಥಳ ಕೂಡ ಅಷ್ಟೇ ಪವಿತ್ರವಾಗಿದೆ ಎಂದು ಪುನರುಚ್ಚರಿಸಿದರು.

ಒಂದೊಂದು ಕ್ಷೇತ್ರದಲ್ಲಿ ಒಂದೊಂದು ದೇವರ ಪ್ರಾವೀಣ್ಯತೆ ಇದೆ. ಕೆಲವೆಡೆ ಶಿವನ ಪ್ರಾವೀಣ್ಯತೆ ಇದ್ದರೆ ಇನ್ನ ಕೆಲವೆಡೆ ವಿಷ್ಣುವಿನ ಪ್ರಾವೀಣ್ಯತೆ ಇದೆ. ಹಾಗೆಯೇ ಇಲ್ಲಿಯು ಬ್ರಹ್ಮ, ವಿಷ್ಣು, ಮಹೇಶ್ವರರು ದೀಪದ ರೂಪದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದರು ಎನ್ನಬಹುದು. ಇದರ ಪ್ರತೀಕವಾಗಿ ತ್ರಿಮೂರ್ತಿ ದತ್ತಾತ್ರೇಯ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ದೀಪದ ಕೆಳಗೆ ಕತ್ತಲು ಎಂಬ ನುಡಿ ಇದೆ. ಯಾವುದೇ ಒಂದು ವಸ್ತು ಇದ್ದಾಗ ಅದರ ಬೆಲೆ ಗೊತ್ತಾಗುವುದಿಲ್ಲ. ದೀಪ ಉರಿಯುತ್ತಿದ್ದಾಗ ಅದರ ಮಹಿಮೆ ಯಾರಿಗೂ ತಿಳಿಯಲಿಲ್ಲ. ಅದನ್ನು ಕಳೆದುಕೊಂಡಾಗ ಅರ್ಥವಾದರೆ ಏನು ಪ್ರಯೋಜನವಿಲ್ಲ. ಇದ್ದಾಗಲೇ ಅದರ ಅನುಭವ ಪಡೆದರೆ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಈಗ ದೀಪ ಉರಿಯುವುದು ನಿಂತಿರಬಹುದು. ಆದರೆ ನಾಳೆ ಈ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ಬಳಿಕ ಅದಕ್ಕೊಂದು ರೂಪ ಸಿಗಲಿದ್ದು, ಈ ಕ್ಷೇತ್ರ ಅಭಿವೃದ್ಧಿಯಾಗಲಿದೆ ಎಂದರು.

ದೇವಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ ಶೇಷಾದ್ರಿ, ಕಾರ್ಯದರ್ಶಿ ಕೆ.ಚಂದ್ರಮೋಹನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.