ಸಾರಾಂಶ
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಬಿಆರ್‌ಟಿಎಸ್ ಚಿಗರಿ ಬಸ್ ನಿಯಂತ್ರಣ ತಪ್ಪಿ ಮದ್ಯದಂಗಡಿಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಇಲ್ಲಿನ ಭೈರಿದೇವರಕೊಪ್ಪ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ 5ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.
ಚಾಲಕ ಶಿವಾನಂದ ವಡ್ಡರ, ಪ್ರಯಾಣಿಕರಾದ ಹುಬ್ಬಳ್ಳಿಯ ಮಹ್ಮದ್ ರಫೀಕ್, ಬಂಡಿವಾಡದ ಪಲ್ಲವಿ ಎಂ. ಅಕ್ಕಿ, ನವಲೂರಿನ ಕಾಶೀನಾಥ ಹಾಗೂ ರಸ್ತೆಯ ಬದಿ ಹೊರಟಿದ್ದ ಮಹದೇವಪ್ಪ ವಾಘ್ಮೋಡೆ ಗಾಯಗೊಂಡಿದ್ದಾರೆ.ಅತೀ ವೇಗವಾಗಿ ಹೊರಟಿದ್ದ ಚಿಗರಿ ಬಸ್ ಉಣಕಲ್ ಬಳಿ ಆಗಮಿಸುತ್ತಿದ್ದಂತೆ ಏಕಾಏಕಿ ನಿಯಂತ್ರಣ ತಪ್ಪಿದೆ. ಈ ವೇಳೆ ಬಸ್‌ನ ಸ್ಟೇರಿಂಗ್ ಬಲಭಾಗಕ್ಕೆ ತಿರುಗಿದ್ದು, ಚಾಲಕ ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣವಾಗದೆ ಭೈರಿದೇವರಕೊಪ್ಪದ ಬಳಿ ಆಗಮಿಸುತ್ತಿದ್ದಂತೆ, ಬಿಆರ್‌ಟಿಎಸ್ ಕಾರಿಡಾರ್‌ಗೆ ಗುದ್ದಿಕೊಂಡು ರಸ್ತೆಯ ಪಕ್ಕದ ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇನ್ನು ಅಪಘಾತದಿಂದ ಗಾಬರಿಗೊಂಡ ಪ್ರಯಾಣಿಕರು ಬಸ್‌ನ ಕಿಟಕಿಯ ಗ್ಲಾಸ್‌ಗಳನ್ನು ಒಡೆದು ಹೊರಗೆ ಬಂದಿದ್ದಾರೆ. ಘಟನೆಯಿಂದ ಚಿಗರಿ ಕಾರಿಡಾರ್ ಅಕ್ಕ-ಪಕ್ಕದಲ್ಲಿ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಪ್ರಯಾಣಿಕರಿಗೆ ತಲೆ, ಕೈ, ಕಾಲು, ಎದೆ, ಹಣೆ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೆಎಂಸಿ ಆರ್‌ಐಗೆ ದಾಖಲಿಸಲಾಗಿದೆ.
ಈ ಕುರಿತು ಹುಬ್ಬಳ್ಳಿ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಘಟನೆ ನಡೆಯುತ್ತಿದ್ದಂತೆ ಚಾಲಕನನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು ಹಲ್ಲೆಗೂ ಮುಂದಾಗಿದ್ದರು. ಅಲ್ಲದೇ ಅದರ ಪಕ್ಕದಲ್ಲಿಯೇ ಬಾರ್ ಅಂಗಡಿಯಿದ್ದು, ಈ ಘಟನೆ ನಡೆಯುತ್ತಿದ್ದಂತೆ ಬಾರ್‌ನಲ್ಲಿದ್ದ ವ್ಯಕ್ತಿಯೋರ್ವ ಬಸ್ಸಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೇಗವಾಗಿ ಹೊರಟಿದ್ದ ಬಸ್ ಅಪಘಾತವಾಗುತ್ತಿದ್ದಂತೆ ಪ್ರಯಾಣಿಕರು ಗಾಬರಿಗೊಂಡು ಚೀರಾಟ ನಡೆಸಿದರು. ಈ ವೇಳೆ ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಎರಡು ಕಡೆ ಬಸ್ ರಭಸವಾಗಿ ಡಿಕ್ಕಿ ಹೊಡೆದ ಶಬ್ದ ಮಾತ್ರ ಕೇಳಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಲಿಲ್ಲ ಎಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗೌರಿ ಎಂಬುವರು ಮಾಹಿತಿ ನೀಡಿದರು.