ಸಾರಾಂಶ
ಸರ್ಕಾರದಿಂದ ಹಿಂದುಳಿದ ಸಮುದಾಯಗಳ ಅನುದಾನ ಗ್ಯಾರಂಟಿಗೆ ಬಳಕೆ । ಬಿಜೆಪಿ ಒಬಿಸಿ ಜಿಲ್ಲಾ ಅಧ್ಯಕ್ಷ ಆಂಜನೇಯಗೌಡ ಆರೋಪಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನುದಾನ ಬಿಡುಗಡೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದು, ನೆಪ ಮಾತ್ರಕ್ಕೆ ಎನ್ನುವಂತೆ ಬಜೆಟ್ ನಲ್ಲಿ ಘೋಷಿಸುವ ಮೊತ್ತಕ್ಕೂ, ವಾಸ್ತವವಾಗಿ ಬಿಡುಗಡೆ ಮಾಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಅಧ್ಯಕ್ಷ ಆಂಜನೇಯ ಗೌಡ ಆರೋಪಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ, ಅಲೆಮಾರಿ ಸಮುದಾಯಗಳು ಹಾಗೂ ಇತರೆ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಈ ಹಿಂದಿನ ಸರ್ಕಾರದಲ್ಲಿ ಪಡೆಯುತ್ತಿದ್ದ ಸ್ವ-ಉದ್ಯೋಗ ಯೋಜನೆ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಅರಿವು ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಲಾಗುತ್ತಿದ್ದ ಉಚಿತ ಬೋರ್ ವೆಲ್ ಯೋಜನೆ ಬಹುತೇಕ ಸ್ಥಗಿತಗೊಂಡಿದ್ದು, ತಮ್ಮ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾಕ್ಕಾಗಿ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗವಾಗಬೇಕಿದ್ದ ಹಣ ವರ್ಗಾವಣೆಯಾಗುತ್ತಿದೆ ಎಂದು ಆರೋಪಿಸಿದರು.
ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅಹಿಂದ ಮಂತ್ರ ಪಠಿಸುವ ಹಾಗೂ ಹಿಂದುಳಿದ ಸಮುದಾಯಗಳನ್ನು ಬಳಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮರಾಮಯ್ಯನವರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಕಲ್ಯಾ ಣ ಕಾರ್ಯಕ್ಕೆ ಕಲ್ಲು ಹಾಕಿದ್ದಾರೆ. ಈ ಸಂಬಂಧವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ರಾಜ್ಯಾದ್ಯಂತ ಡಿಸೆಂಬರ್ 13 ರ ಶುಕ್ರವಾರದಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ಜಿಲ್ಲೆಯ ಅಂಬೇಡ್ಕರ್ ವೃತ್ತದಲ್ಲಿಯೂ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು.ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ ಮಾತನಾಡಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ 546 ಕೋಟಿ ರು. ಅನುದಾನ ಬಿಡುಗಡೆಯಾದರೆ, 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನಿಗಮಗಳಿಗೆ ಒಟ್ಟಾರೆ ಬಿಡುಗಡೆ ಮಾಡಿದ್ದು ಕೇವಲ 170 ಕೋಟಿ ರು. ಮಾತ್ರ.
ಡಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರು., ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 6.50 ಕೋಟಿ ರು.,ನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ 4.50 ಕೋಟಿ ರು., ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ 2.50 ಕೋಟಿ ರು., ಕರ್ನಾಟಕ ಅಲೆಮಾರಿ ಅರೆ- ಅಲೆಮಾರಿ ಅಭಿವೃದ್ದಿ ನಿಗಮಕ್ಕೆ 6 ಕೋಟಿ ರು.,ಕರ್ನಾಟಕ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮಕ್ಕೆ 4.50 ಕೋಟಿ ರು., ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ 7.50 ಕೋಟಿ ರು.,ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 30 ಕೋಟಿ ರು., ಕರ್ನಾಟಕ ಕಾಡುಗೊಲ್ಲ ಮರಾಠ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರು. ಬಿಡುಗಡೆ ಮಾಡಿದೆ.
2024-25 ರಲ್ಲಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ 1600 ಕೋಟಿ ರು. ಬಿಡುಗಡೆ ಮಾಡಲಾಗುವುದೆಂದು ಬಜೆಟ್ನಲ್ಲಿಘೋಷಣೆ ಮಾಡಿ, ಕೇವಲ 347 ಕೋಟಿ ರು.ಗಳ ಅನುದಾನ ಮಾತ್ರ ಬಿಡುಗಡೆಮಾಡಿದೆ ಎಂದು ಅಂಕಿ ಅಂಶಗಳನ್ನು ನೀಡಿದರು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಕಾರ್ಯಕಾರಿಣಿ ಸದಸ್ಯ ಕೊಂಡಪ್ಪ, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ ಇದ್ದರು.