ಚಿಕ್ಕಬಾಣಾವರ ಕೆರೆ ಅಭಿವೃದ್ಧಿ ಕಾರ್ಯ ಚುರುಕು

| Published : May 01 2024, 02:06 AM IST

ಸಾರಾಂಶ

105 ಎಕರೆ ವಿಸ್ತೀರ್ಣದ ಚಿಕ್ಕಬಾಣಾವರ ಕೆರೆಯ ಅಭಿವೃದ್ಧಿ ಕಾರ್ಯ ಚುರುಕುಗೊಂಡಿದೆ. ಕೆರೆಯ ಹೂಳು ತೆಗೆದು ವಾಕ್‌ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ.

ಪ್ರಶಾಂತ್ ಕೆಂಗನಹಳ್ಳಿ

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಬಿಡಿಎ ಮತ್ತು ಚಿಕ್ಕಬಾಣಾವರ ಪುರಸಭೆಯ ವತಿಯಿಂದ ಅಭಿವೃದ್ಧಿ ಆಗುತ್ತಿರುವ ಚಿಕ್ಕಬಾಣಾವರ ಗ್ರಾಮದ ಕೆರೆ ಕಾಮಗಾರಿ ಚುರುಕುಗೊಂಡಿದೆ.

ಕೆರೆ ಅಭಿವೃದ್ಧಿಗೆ ಬಿಡಿಎ ₹12.60 ಕೋಟಿ ಮತ್ತು ಪುರಸಭೆಯಿಂದ ₹2 ಕೋಟಿ ವೆಚ್ಚ ಮಾಡುತ್ತಿವೆ. 105 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕೆರೆ ಅಭಿವೃದ್ಧಿ ಕಾರ್ಯ ವೇಗವಾಗಿ ಸಾಗಿದೆ.

ಡಾ। ಶಿವರಾಮ ಕಾರಂತ ಬಡಾವಣೆಯ ಅಭಿವೃದ್ಧಿಯೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊಳಚೆಯಿಂದ ತುಂಬಿರುವ ಚಿಕ್ಕಬಾಣಾವರ ಕೆರೆ ಪುನರುಜ್ಜೀವನಗೊಳಿಸುವ ಕಾಮಗಾರಿಯನ್ನೂ ಆರಂಭಿಸಿದೆ. ಪುನರುಜ್ಜೀವನದ ಭಾಗವಾಗಿ ಕೆರೆಯ ತಳದಿಂದ ಹೂಳು, ಹೂಳು ಮಿಶ್ರಿತ ಮರಳನ್ನು ತೆಗೆದು ಅದನ್ನು ಸ್ಪಾಯ್ಲ್ ಬ್ಯಾಂಕ್ ಅಥವಾ ನಿಗದಿತ ಡಂಪ್ ಯಾರ್ಡ್‌ಗಳಲ್ಲಿ ಠೇವಣಿ ಮಾಡಲಿದೆ. ಸರೋವರದ ಪರಿಧಿಯ ಉದ್ದಕ್ಕೂ ವಾಕ್‌ವೇ, ಮಣ್ಣಿನ ಒಡ್ಡು ನಿರ್ಮಿಸಲಾಗುತ್ತಿದೆ. ಕೆರೆಗೆ ಬರುತ್ತಿರುವ ತ್ಯಾಜ್ಯ ನೀರನ್ನು ತಿರುಗಿಸಲು ಚರಂಡಿಯನ್ನು ನಿರ್ಮಿಸಲಾಗುತ್ತಿದೆ.

ಶಾಸಕ ಎಸ್.ಮುನಿರಾಜು ಮಾತನಾಡಿ, ಚಿಕ್ಕಬಾಣಾವಾರ ಕೆರೆ ಅಭಿವೃದ್ಧಿಯತ್ತ ಸಾಗಿದೆ. ಕೆರೆ ಕೆಲಸವೂ ಶೇಕಡ 40ರಷ್ಟು ಮುಗಿದಿದೆ. ಇನ್ನೂ ಕೆಲ ಕೆಲಸ ಬೇಗ ಮುಗಿಯುತ್ತದೆ. ಕೆಲಸ ಸಂಪೂರ್ಣ ಮುಗಿದರೆ ಪ್ರವಾಸಿ ತಾಣವಾಗುತ್ತದೆ ಎಂದರು.

ಪುರಸಭೆ ವತಿಯಿಂದಲೂ ಎರಡು ಕೋಟಿ ವೆಚ್ಚದಲ್ಲಿ ಈಗಾಗಲೇ ಕೆರೆಯ ಅಂಗಳದಲ್ಲಿದ್ದ ಜಂಡು, ಗಿಡಗಂಟೆಗಳನ್ನು ತೆಗೆದು ಹಿಟಾಚಿಗಳಲ್ಲಿ ಕೆರೆಯ ಹೂಳು ತೆಗೆದು ವಾಕಿಂಗ್ ಪಾಥ್‌ ನಿರ್ಮಿಸಲಾಗುತ್ತಿದೆ. ಈಗಾಗಲೇ ಶೇಕಡ 40 ಭಾಗ ಕೆಲಸ ಮುಗಿದಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎ.ಕುಮಾರ್ ಮಾಹಿತಿ ನೀಡಿದರು.

ಸ್ಥಳೀಯ ನಿವಾಸಿ ಚಿಕ್ಕಣ್ಣ ಮಾತನಾಡಿ, ಕೆರೆಯ ಅಭಿವೃದ್ಧಿ ಕೆಲಸವು ವೇಗವಾಗಿ ಸಾಗಿದೆ. ಕೆರೆಗೆ ಮನೆ, ಕೈಗಾರಿಕೆ, ಅಪಾರ್ಟ್ಮೆಂಟ್, ರಾಜಕಾಲುವೆಯಿಂದ ಬರುತ್ತಿದ್ದ ಕಲುಷಿತ ನೀರು ಕೆರೆಗೆ ಬಾರದಂತೆ ತಡೆಯಲಾಗಿದೆ. ಕೆರೆ ಮಣ್ಣು, ಕಲುಷಿತ ನೀರು ತೆಗೆದು ಸುತ್ತಲೂ ಸಂರಕ್ಷಣೆ ಮಾಡುತ್ತಿದ್ದಾರೆ ಎಂದರು.

ಕೆರೆಯ ಮಣ್ಣು ಎತ್ತುವ ಕಾರ್ಯ ವೇಗದಿಂದ ಸಾಗುತ್ತಿದೆ. ಮಳೆಗಾಲ ಬರುವಷ್ಟರಲ್ಲಿ ಬೇಗ ಕೆಲಸ ಮುಗಿಸಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್ ನಿರಂಜನ್ ತಿಳಿಸಿದರು.