ಸಾರಾಂಶ
ಚಿಕ್ಕದೇವರಾಜ ಒಡೆಯರ್ (ಸಿಡಿಎಸ್) ಕಾಲುವೆ ಏರಿ ಒಡೆದ ಪರಿಣಾಮ ಈ ನಾಲೆ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ, ದರಸಗುಪ್ಪೆ, ಕೆನ್ನಾಳು, ಬಾಬುರಾಯನಕೊಪ್ಪಲು, ಕಿರಂಗೂರಿನ ಗ್ರಾಮದ ಕೃಷಿಕರ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಬೆಳೆ, ಭತ್ತ, ತೆಂಗು, ಅಡಿಕೆ, ಬಾಳೆ ಅಧಿಕವಾಗಿ ನೀರು ನುಗ್ಗಿ ಸಂಪೂರ್ಣವಾಗಿ ನಾಶವಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಭಾರೀ ಮಳೆಯಿಂದಾಗಿ ಚಿಕ್ಕದೇವರಾಯ (ಸಿಡಿಎಸ್) ನಾಲೆ ಏರಿ ಒಡೆದು ರೈತರ ಅಪಾರ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ದರಸಗುಪ್ಪೆ ಗ್ರಾಮದ ಬಳಿ ನಡೆದಿದೆ.ಕಾವೇರಿ ನದಿ ಎಡದಂಡೆ ಅಣೆಕಟ್ಟೆಯಿಂದ ಬರುವ ಸಿಡಿಎಸ್ ನಾಲೆ ಏರಿ ಒಡೆದು ಸುಮಾರು ನೂರಾರು ಎಕರೆ ಜಮೀನು ಮುಳುಗಡೆಗೊಂಡು ಬೆಳೆದು ನಿಂತಿದ್ದ ಕಬ್ಬು, ಭತ್ತ, ಬಾಳೆ, ರಾಗಿ, ಅಡಿಕೆ ತೆಂಗು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ನಷ್ಟಗೊಂಡು ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ದಸರಗುಪ್ಪೆ ಗ್ರಾಮದ ಬಳಿ ಗುರುವಾರ ರಾತ್ರಿ ಬಿರುಗಾಳಿ ಸಹಿತ ಸಿಡಿಲಿನೊಂದಿಗೆ ಅಪಾರ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದ ನಾಲಾ ಏರಿ ಕೊರೆದು ಈ ಘಟನೆ ಸಂಭವಿಸಿದೆ.ಚಿಕ್ಕದೇವರಾಜ ಒಡೆಯರ್ (ಸಿಡಿಎಸ್) ಕಾಲುವೆ ಏರಿ ಒಡೆದ ಪರಿಣಾಮ ಈ ನಾಲೆ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ, ದರಸಗುಪ್ಪೆ, ಕೆನ್ನಾಳು, ಬಾಬುರಾಯನಕೊಪ್ಪಲು, ಕಿರಂಗೂರಿನ ಗ್ರಾಮದ ಕೃಷಿಕರ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಬೆಳೆ, ಭತ್ತ, ತೆಂಗು, ಅಡಿಕೆ, ಬಾಳೆ ಅಧಿಕವಾಗಿ ನೀರು ನುಗ್ಗಿ ಸಂಪೂರ್ಣವಾಗಿ ನಾಶವಾಗಿದೆ.
ನಾಲಾ ಏರಿ ಒಡೆದ ಪರಿಣಾಮ ರೈತರಾದ ಶಿವಲಿಂಗೇಗೌಡ, ಅನುಸೂಯ ಕರೀಗೌಡ, ಕೃಷ್ಣ, ಸ್ವಾಮಿಗೌಡ, ಕೆ. ಗೋಪಾಲ್, ಚೆನ್ನೇಗೌಡ, ಚಂದ್ರು, ಶಂಕರ್ ನಾರಾಯಣ್, ನಿಂಗೇಗೌಡ, ಕೆ. ಎನ್. ಕುಮಾರ್, ಶ್ರೀಧರ್, ರವಿತಮ್ಮಣ್ಣೇಗೌಡ, ದೊಡ್ಡಣ್ಣಯ್ಯ ಬಸವೇಗೌಡ, ಮಹದೇವು ಸೇರಿದಂತೆ ಕೆನ್ನಾಳು ಗ್ರಾಮಗಳ ರೈತರ ಜಮೀನುಗಳು ಸಹ ಮುಳುಗಡೆಗೊಂಡು ಜೊತೆಗೆ ಜಮೀನುಗಳಲ್ಲಿ ನೀರಿನ ಹರಿತದಿಂದಾಗಿ ಬೆಳೆ ಕೊಚ್ಚಿ ಹೋಗಿದೆ. ಇದರಿಂದ ಬೆಳೆ ನಷ್ಟಗೊಳಗಾದ ರೈತರು ಕಂಗಾಲಾಗಿದ್ದಾರೆ. ಎಂದಿನಂತೆ ಬೆಳಗ್ಗೆ ರೈತರು ತಮ್ಮ ಜಮೀನುಗಳ ಬಳಿ ಬಂದ ನೋಡಿ ಆಘಾತಗೊಂಡಿದ್ದಾರೆ. ತಕ್ಷಣವೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನೀರಾವರಿ ಅಧಿಕಾರಿಗಳು ಧಾವಿಸಿ ಸಿಡಿಎಸ್ ನಾಲೆ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ. ಅತಿವೃಷ್ಠಿಯಿಂದಾಗಿ ಬೆಳೆ ಹಾಳಾಗಿರುವ ರೈತರ ಸಂಕಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕೂಡಲಕುಪ್ಪೆ ರೈತ ಗೋಪಾಲ್ ರೈತರ ಒತ್ತಾಯಿಸಿದ್ದಾರೆ.