ಮುತ್ತತ್ತಿರಾಯನ ಸೇವೆಯೊಂದಿಗೆ ಚಿಕ್ಕಲ್ಲೂರು ಜಾತ್ರೆ ಸಂಪನ್ನ

| Published : Jan 18 2025, 12:48 AM IST

ಮುತ್ತತ್ತಿರಾಯನ ಸೇವೆಯೊಂದಿಗೆ ಚಿಕ್ಕಲ್ಲೂರು ಜಾತ್ರೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಪವಾಡಗಳ ಸಿದ್ಧಪುರುಷ ಘನ ನೀಲಿ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆಯಲ್ಲಿ ವಿವಿಧ ಉತ್ಸವಗಳು ಸಂಭ್ರಮ ಸಡಗರದಿಂದ ವೈಭವವಾಗಿ ನಡೆದವು. 5ನೇ ದಿನದಂದು ಶುಕ್ರವಾರ ಮುತ್ತತ್ತಿರಾಯನ ಸೇವೆಯನ್ನು ಮಾಡುವ ಮೂಲಕ ಐದು ದಿನಗಳ ಜಾತ್ರೆ ಮಹೋತ್ಸವಕ್ಕೆ ತೆರೆ ಬಿದ್ದಿತು.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಪವಾಡಗಳ ಸಿದ್ಧಪುರುಷ ಘನ ನೀಲಿ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆಯಲ್ಲಿ ವಿವಿಧ ಉತ್ಸವಗಳು ಸಂಭ್ರಮ ಸಡಗರದಿಂದ ವೈಭವವಾಗಿ ನಡೆದವು. 5ನೇ ದಿನದಂದು ಶುಕ್ರವಾರ ಮುತ್ತತ್ತಿರಾಯನ ಸೇವೆಯನ್ನು ಮಾಡುವ ಮೂಲಕ ಐದು ದಿನಗಳ ಜಾತ್ರೆ ಮಹೋತ್ಸವಕ್ಕೆ ತೆರೆ ಬಿದ್ದಿತು.

ಹನೂರು ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಸಿದ್ದಪ್ಪಾಜಿ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿ ವಿವಿಧ ಉತ್ಸವಗಳಾದ ಚಂದ್ರಮಂಡಲ, ಉತ್ಸವ ಹುಲಿವಾಹನ ಉತ್ಸವ, ಮುಡಿಸೇವೆ, ಪಂಕ್ತಿ ಸೇವೆ ಸೇರಿದಂತೆ ಕಂಡಾಯಗಳ ಉತ್ಸವ ಕೊನೆಯ ದಿನ ಮುತ್ತತ್ತಿರಾಯನ ಸೇವೆಯನ್ನು ಅದ್ಧೂರಿಯಾಗಿ ನೆರವೇರಿಸಿದರು.

ಚಿಕ್ಕಲ್ಲೂರು ಪುಣ್ಯಕ್ಷೇತ್ರ ಸಮೀಪದ ಕಾವೇರಿ ನದಿ ಎಡದಂಡೆಗೆ ಮುತ್ತತ್ತಿರಾಯನ ವೈಷ್ಣವಿ ಕೇಂದ್ರವಿದ್ದು ಹಲಗೂರಿಗೆ ಸಿದ್ದಪ್ಪಾಜಿ ಭಿಕ್ಷೆಗೆ ಹೋಗುವಾಗ ಮುತ್ತತ್ತಿರಾಯ ಸಿದ್ದಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗಿರುತ್ತಾನೆ. ಇವರಿಬ್ಬರ ಸ್ನೇಹದ ಕುರುಹಾಗಿ ಚಿಕ್ಕಲ್ಲೂರು ಜಾತ್ರೆಯ ಕಡೆಯ ದಿನ ಮುತ್ತತ್ತಿರಾಯನ ಸೇವೆ ಜರುಗಲಿದೆ. ವಿಶೇಷವೇನೆಂದರೆ ಈ ದಿನ ನೀಲಗಾರರು ಶ್ರೀ ವೈಷ್ಣವ ಬಿರುದಾರರ ದಾಸಯ್ಯರನ್ನು ಪೂಜಾ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಸಸ್ಯಹಾರಿ ಹಾಗೂ ಮಾಂಸಹಾರದ ಅಡುಗೆ ಮಾಡಿ ಅವರ ದಂಡ ಕೋಲು, ಕಣಜ, ಅರಿವೆಗಳಿಗೆ, ಎಡೆ ಇಟ್ಟು ಸಾಂಪ್ರದಾಯವಾಗಿ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ನೀಲಗಾರರು ಸಹ ನೆತ್ತಿಗೆ ಮೂರು ನಾಮವನ್ನು ಹಾಕಿಕೊಂಡು ಮುತ್ತತ್ತಿರಾಯನ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.

ಈ ಪೂಜೆಯನ್ನು ಹಲವಾರು ವರ್ಷಗಳಿಂದ ಚಿಕ್ಕಲ್ಲೂರು ಮಠದ ಪೀಠಾಧಿಪತಿಗಳ ಸಾನ್ನಿಧ್ಯದಲ್ಲಿ ಚಿಕ್ಕಲ್ಲೂರು ತಂಬಡಿ ಅವರ ಮಾರ್ಗದರ್ಶನದಲ್ಲಿ ತೆಳ್ಳನೂರು ಮಾಯಗೌಡ ಅವರ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಾ ಬಂದಿದೆ.ಚಿಕ್ಕಲ್ಲೂರು ಜಾತ್ರೆಯ ವಿಶೇಷತೆ:

ಸಿದ್ದಪ್ಪಾಜಿ ಹಾಗೂ ಮುತ್ತತ್ತಿರಾಯನ ಪರಂಪರೆಯಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಉತ್ಸವ ಮೂರ್ತಿಗಳನ್ನು ಹಾಗೂ ಕರಿಯಣ್ಣ ಕೆಂಚಣ್ಣ ದೇವರನ್ನು ಅಲಂಕೃತಗೊಳಿಸಿ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ವಿಧಿ ವಿಧಾನಗಳೊಂದಿಗೆ ಮತ್ತು ವಾದ್ಯ ಮೇಳಗಳ ಮೂಲಕ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿದ್ದಪ್ಪಾಜಿ ಮತ್ತು ಮುತ್ತತ್ತಿರಾಯನ ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷತೆಯಾಗಿದೆ. ಜೊತೆಗೆ ಚಿಕ್ಕಲ್ಲೂರು ಜಾತ್ರೆಯ ಐದನೇ ದಿನ ಕೊನೆಯ ದಿನವಾದ ಶುಕ್ರವಾರ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಸಿದ್ದಪ್ಪಾಜಿಗೆ ಪೂಜೆ ಸಲ್ಲಿಸಿ ನಂತರ ಮುತ್ತತ್ತಿರಾಯನ ಸೇವೆ ಮಾಡುವ ಮೂಲಕ ತಮ್ಮೆಲ್ಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವಂತೆ ನಿವೇದನೆ ಮಾಡುವ ಮೂಲಕ ವಿಜೃಂಭಣೆಯ ಜಾತ್ರೆಗೆ ತೆರೆ ಬಿದ್ದಿತು.

ಅಪರ ಗೋಪುರ:

ಮುತ್ತತ್ತಿರಾಯನ ವೈಷ್ಣವಿ ಪಂಥಕ್ಕೆ ಸೇರಿದ್ದು ದಾಸಯ್ಯನವರು ಪಾಲಿಸುವ ಅಪರ ಗೋಪುರವನ್ನು ಶುಕ್ರವಾರ ಚಿಕ್ಕಲ್ಲೂರು ಶ್ರೀ ಕ್ಷೇತ್ರದಲ್ಲಿ ಭಾರಿ ವಿಜೃಂಭಣೆಯಿಂದ ಅಪಾರ ಭಕ್ತಸ್ತೋಮದ ನಡುವೆ ನಡೆಯಿತು. ಕರಿಯಣ್ಣ-ಕೆಂಚಣ್ಣ ದೇವರ ಮೂರ್ತಿಗಳನ್ನು ದಾಸಯ್ಯನವರು ಹೊತ್ತು ವಾದ್ಯ ಮೇಳಗಳ ತಾಳಕ್ಕೆ ಆಪರ ಗೋಪರ ಎಂದು ಕೂಗುತ್ತಾ ಕುಣಿಯುತ್ತಾರೆ. ಇದೇ ವೇಳೆ (ಅಪರಗೋಪುರ) ಕಡಲೆಪುರಿ, ತೆಂಗಿನಕಾಯಿ ಚೂರುಗಳು ಮತ್ತು ಬೆಲ್ಲ ಮಿಶ್ರಿತ ಪದಾರ್ಥಗಳನ್ನು ಗೋಪುರ ರೀತಿಯಲ್ಲಿ ಗುಡ್ಡೆ ಹಾಕಿ ಅದನ್ನು ಕೈಯಲ್ಲಿ ಮುಟ್ಟದೆ ಬಾಯಿಂದಲೇ ಪದಾರ್ಥಗಳನ್ನು ಮುಗಿಬಿದ್ದು ತಿನ್ನುವ ಮೂಲಕ ಕರಿಯಣ್ಣ ಮತ್ತು ಕೆಂಚಣ್ಣ ದೇವರನ್ನು ತೃಪ್ತಿ ಪಡಿಸುವ ಸಂಕೇತವಾಗಿ ಸಂಪ್ರದಾಯವನ್ನು ಪಾಲಿಸಿದರು.

ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಸಾಂಸ್ಕೃತಿಕ ಪರಂಪರೆಯಲ್ಲಿ ಸಹ ಪಂಕ್ತಿ ಸೇವೆ (ಮಾಂಸಹಾರ) ಚಿಕ್ಕಲ್ಲೂರು ಜಾತ್ರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಸಾಂಪ್ರದಾಯದಂತೆ ಜಾತ್ರಾ ಮಹೋತ್ಸವದ ದಿನಗಳಲ್ಲಿ ಪಾಣಿ ದಯಾ ಸಂಘದವರು ಕಾನೂನು ಹೋರಾಟ ಮೂಲಕ ಚಿಕ್ಕಲ್ಲೂರು ಜಾತ್ರೆಯಲ್ಲಿ ಜಿಲ್ಲಾಡಳಿತದ ಮೂಲಕ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮದ ಅನ್ವಯ ಜಾತ್ರೆಯಲ್ಲಿ ಕುರಿ, ಕೋಳಿ, ಮೇಕೆ ಬಲಿಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮತ್ತೊಂದೆಡೆ ಪಂಕ್ತಿ ಭೋಜನ ನಮ್ಮ ಆಹಾರ ಪದ್ಧತಿ ಅದನ್ನು ಪಾಲಿಸುತ್ತೇವೆ. ದೇವಾಲಯದಲ್ಲಿ ಬಲಿಪೀಠ ಇಲ್ಲ ಎಂದು ಸಿದ್ದಪ್ಪಾಜಿ ಮಂಟೇಸ್ವಾಮಿ ಪರಂಪರೆಯ ಅನುಯಾಯಿಗಳು ಪಂಕ್ತಿಸೇವೆ ನಡೆಸಲು ಕಾನೂನು ನಿಯಮವಿದೆ. ಆದರೆ ಇಲ್ಲಿ ಬಲಿಪೀಠ ಇಲ್ಲ ಎಂದು ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಂಕ್ತಿ ಸೇವೆಗೆ ಅಡ್ಡಿಪಡಿಸಬಾರದು ಎಂದು ಜಾತ್ರೆಯಲ್ಲಿ ಅರಿವು ಮೂಡಿಸಿದರು. ಭಕ್ತರಿಗೆ ಕಳೆದ ಐದು ದಿನಗಳಿಂದ ವಿವಿಧ ಉತ್ಸವಗಳು ಪೂಜಾ ಕಾರ್ಯಕ್ರಮಗಳು ಚಿಕ್ಕಲ್ಲೂರು ಘನನೀಲಿ ಸಿದ್ದಪ್ಪಾಜಿ ಮಂಟೇಸ್ವಾಮಿ ಭಕ್ತರ ಭಕ್ತಿಯ ಪರಾಕಾಷ್ಠೆಗೆ ಮೆರೆದ ಭಕ್ತರು ವಿವಿಧ ಉತ್ಸವಗಳಲ್ಲಿ ಸಂಭ್ರಮದ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ ಸಂಪನ್ನಗೊಂಡಿದೆ.

ಬಿಗಿ ಪೊಲೀಸ್ ಭದ್ರತೆ:

ಕಳೆದ 5 ದಿನಗಳಿಂದ ಚಿಕ್ಕಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಪೊಲೀಸರನ್ನು ಚೆಕ್‌ಪೋಸ್ಟ್‌ ಸೇರಿ ಇತರೆ ಕಡೆ ನಿಯೋಜನೆಗೊಳಿಸಿತ್ತು.