ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಓಡಿಸುವ ಜೊತೆಗೆ ಚಿಕ್ಕಮಗಳೂರು-ಬೇಲೂರು-ಆಲೂರಿನ ರೈಲ್ವೆ ಮಾರ್ಗಕ್ಕೆ 585 ಎಕರೆ ಜಾಗವನ್ನು ಜಿಲ್ಲಾಧಿಕಾರಿ 11 ನೋಟಿಫಿಕೇಷನ್ ಮಾಡಿದ್ದಾರೆ. ಭೂಮಿಯನ್ನು ತಕ್ಷಣದಲ್ಲೇ ನಮಗೆ ಹಸ್ತಾಂತರ ಮಾಡಲಿದ್ದಾರೆ. ಮೂರು ವರ್ಷಗಳಲ್ಲಿ ಆ ಯೋಜನೆ ಮುಗಿಯಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.ಸೋಮವಾರ ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಂದ ಮೇಲೆ ಕರ್ನಾಟಕ ರಾಜ್ಯದಲ್ಲಿ ಹನ್ನೊಂದು ಯೋಜನೆಗಳಡಿ 1800 ಹೊಸಲೈನ್‌ಗಳನ್ನು ಹಾಕಲು ಚಾಲನೆ ಕೊಟ್ಟಿದ್ದೇವೆ. ಈಗಾಗಲೇ ತುಮಕೂರು, ರಾಯದುರ್ಗ, ದಾವಣಗೆರೆ, ಗದಗ ಹತ್ತು ಹಲವಾರು ಕಡೆ ಕೆಲಸ ನಡೆಯುತ್ತಿದೆ. 43 ಸಾವಿರ ಕೋಟಿ ರೂಪಾಯಿಗಳ ನೆನಗುದಿಗೆ ಬಿದ್ದಿರುವ ಕೆಲಸ ಕೈಗೆತ್ತುಕೊಂಡಿದ್ದೇವೆ.
ರಾಷ್ಟ್ರದ ಪ್ರಧಾನಮಂತ್ರಿ ನಮ್ಮ ನೆಚ್ಚಿನ ನರೇಂದ್ರಮೋದಿಯವರು ದೇಶದ ಇತಿಹಾಸಲ್ಲಿ ಭಾರತೀಯರಿಗೆ ಭವಿಷ್ಯ ಇದೆ ಅನ್ನೋದನ್ನ ಹತ್ತು ವರ್ಷಗಳಲ್ಲಿ ತೋರಿಸಿಕೊಟ್ಟಿದ್ದಾರೆ. 44 ಸಾವಿರ ಡಬ್ಲಿಂಗ್ ಲೈನ್‌ನ್ನು ಮಾಡಿ, ಶೇ.98ರಷ್ಟು ರೈಲ್ವೆ ಮಾರ್ಗಗಳನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಹೊಸಲೈನ್‌ಗಳನ್ನ ತ್ವರಿತಗತಿಯಲ್ಲಿ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.104 ವಂದೇ ಭಾರತ್ ರೈಲುಗಳು ಇಡೀ ದೇಶದ 24 ರಾಜ್ಯಗಳಲ್ಲಿ 294 ಜಿಲ್ಲಾ ಕೇಂದ್ರಗಳಲ್ಲಿ ಸುತ್ತಾಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ 10 ರೈಲುಗಳು ಓಡಾಡುತ್ತಿವೆ. ಒಂದೊಂದು ಪ್ಯಾಸೆಂಜರ್ ರೈಲುಗಳಿಗೆ ಮೂರು, ನಾಲ್ಕು ಬೋಗಿಗಳಂತೆ 30 ಸಾವಿರ ಹೊಸ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ತುಮಕೂರಿನಿಂದ ಬೆಂಗಳೂರಿಗೆ ಮೆಮೊ ಟ್ರೈನ್ ಹೊಸದಾಗಿ ಮಾಡಿದ್ದೇವೆ. ಅದೇ ರೈಲು ಹಾಸನದಿಂದ ಬೆಂಗಳೂರಿಗೆ ಓಡಾಡಲು ನಮ್ಮ ದರದಲ್ಲಿ 60% ನಲ್ಲಿ ಓಡಾಡಲು ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಭಾರತ ದೇಶ ಭವಿಷ್ಯದ ಭಾರತದಲ್ಲಿ ರೈಲ್ವೆ ಇಲಾಖೆ ಇಡೀ ವಿಶ್ವದ ಭೂಪಟದಲ್ಲಿ ಐದನೇ ಸ್ಥಾನದಲ್ಲಿತ್ತು. ಅದನ್ನು ಈಗ ಮೂರನೇ ಸ್ಥಾನಕ್ಕೆ ತರಲು ತೀರ್ಮಾನ ಆಗಿದೆ. ಈ ಬಗ್ಗೆ ನವೆಂಬರ್ 1 ಹಾಗೂ 2ರಂದು ಪ್ರಧಾನಮಂತ್ರಿಗಳು ಪ್ರಗತಿ ಪರಿಶೀಲನೆ ಮಾಡಲಿದ್ದಾರೆ. ನಾಳೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾಳೆ(ಅ.29) ಒಂದು ಲಕ್ಷ ಉದ್ಯೋಗಿಗಳಿಗೆ ಅರ್ಹತಾ ಪತ್ರ ಕೊಡಲಿದ್ದೇವೆ ಎಂದು ಹೇಳಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು ಎಂಬುದು ಪ್ರಧಾನಿ ಅವರ ಚಿಂತನೆ. ಪತ್ರಕರ್ತರಿಗೆ, ಹಿರಿಯ ನಾಗರಿಕರಿಗೆ ಪಾಸ್ ನಿಂತಿದೆ. ಅವರಿಗೆ ಅವಕಾಶ ಕೊಡಲು ನನ್ನದು ಒತ್ತಾಯವಿದೆ. ಪ್ರಧಾನಮಂತ್ರಿ ಅವರು ಆ ಕೆಲಸ ಮಾಡುತ್ತಾರೆ. ಭಾರತ ಸರ್ಕಾರ ಯಾವುದೇ ರಾಜ್ಯದ ಸರ್ಕಾರದ ಜೊತೆ ಸಂಘರ್ಷ ಮಾಡುವುದಿಲ್ಲ ಎಂದರು.
ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ. ನಾನು ಕೂಡ ನ.2ರಿಂದ ಪ್ರಚಾರಕ್ಕೆ ಹೊರಡುತ್ತೇನೆ. ನಾವೇ ಗೆಲ್ತೀವಿ, ನಾವೇ ಗೆಲ್ತೀವಿ, ನಾವೇ ಗೆಲ್ತಿವಿ ಎಂದು ಪುನರುಚ್ಚರಿಸಿದರು.