ದೇವಿರಮ್ಮ ಬೆಟ್ಟಕ್ಕೆ ಜನಸಾಗರ- ಸತತ 28ನೇ ವರ್ಷ ಬೆಟ್ಟ ಹತ್ತಿದ ಶಾಸಕ ಸಿ.ಟಿ.ರವಿ

| Published : Nov 01 2024, 12:04 AM IST

ದೇವಿರಮ್ಮ ಬೆಟ್ಟಕ್ಕೆ ಜನಸಾಗರ- ಸತತ 28ನೇ ವರ್ಷ ಬೆಟ್ಟ ಹತ್ತಿದ ಶಾಸಕ ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಅಂಗವಾಗಿ 40 ಸಾವಿರಕ್ಕೂ ಅಧಿಕ ಮಂದಿ ಮಳೆಯ ನಡುವೆಯೂ ಗುರುವಾರ ಚಿಕ್ಕಮಗಳೂರಿನ ಪ್ರಸಿದ್ಧ ಬಿಂಡಿಗ ದೇವಿರಮ್ಮ ಬೆಟ್ಟವನ್ನು ಏರಿ ದೇವಿಯ ದರ್ಶನ ಪಡೆದರು. ಈ ವೇಳೆ 10 ಮಂದಿ ಭಕ್ತರು ಅಸ್ವಸ್ಥರಾದರು. ಮೇಲ್ಮನೆ ಸದಸ್ಯ ಸಿ.ಟಿ. ರವಿ ಅವರು ಸತತ 28ನೇ ವರ್ಷವೂ ಬೆಟ್ಟ ಏರಿದ್ದು ವಿಶೇಷ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ಪ್ರಸಿದ್ಧ ಬಿಂಡಿಗ ದೇವಿರಮ್ಮನ ಬೆಟ್ಟವನ್ನು ಏರಿ ದೇವಿಯ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಗಳಿಂದ ಸುಮಾರು 40000ಕ್ಕೂ ಹೆಚ್ಚಿನ ಭಕ್ತರು ಆಗಮಿಸಿ ದೇವಿರಮ್ಮನ ದರ್ಶನ ಪಡೆದರು. ದಿಪಾವಳಿ ಹಬ್ಬದ ಅಂಗವಾಗಿ ಶ್ರೀ ದೇವಿರಮ್ಮ ದೀಪೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಬುಧವಾರ ರಾತ್ರಿಯೇ ಭಕ್ತರು ದೇವಿರಮ್ಮ ಬೆಟ್ಟವನ್ನು ಏರಲು ಆರಂಭಿಸಿದರು. ಬೆಳಗಿನ ಜಾವ ನೋಡು ನೋಡುತ್ತಿದ್ದಂತೆ ಭಕ್ತ ಸಾಗರ ಬೆಟ್ಟದ ಮೇಲೆ ಹರಿದು ಬಂದಿತು. ಕಳೆದ ವರ್ಷ ದೀಪಾವಳಿ ವೇಳೆ ಮಳೆ ಇರಲಿಲ್ಲ. ಆದರೆ ಈ ಬಾರಿ ಮಳೆ ಇದ್ದುದ್ದರಿಂದ ಬೆಟ್ಟ ಏರಲು ಭಕ್ತರಿಗೆ ತುಂಬಾ ಸಮಸ್ಯೆಯಾಯಿತು.

ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಬೆಟ್ಟದಲ್ಲಿ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಗ್ನಿ ಶಾಮಕದಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ದೇವಿರಮ್ಮ ದೀಪೋತ್ಸವದಲ್ಲಿ ಬಂದೋಬಸ್ತ್‌ಗಾಗಿ ಸುಮಾರು 800 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.

10 ಮಂದಿ ಅಸ್ವಸ್ಥ:

ದೇವಿರಮ್ಮ ಬೆಟ್ಟದಲ್ಲಿರುವ ಬಿಂಡಿಗ ದೇವಿರಮ್ಮ ದರ್ಶನಕ್ಕೆ ಭಕ್ತರು ಬೆಟ್ಟ ಏರುವ ಸಂದರ್ಭದಲ್ಲಿ ಸುಮಾರು 10 ಮಂದಿ ಅಸ್ವಸ್ಥಗೊಂಡಿದ್ದಾರೆ. ದಕ್ಷಿಣ ಕನ್ನಡ ಮೂಲದ ಜಯಮ್ಮ‌ (55) ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವರನ್ನು ಪೊಲೀಸರು ಹಗ್ಗದ ಮೂಲಕ ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕೊಂಡಯ್ಯಲಾಗಿದೆ. ಇತರೆ 9 ಮಂದಿಗೆ ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕವಾಗಿ ತೆರೆಯಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸಿ.ಟಿ ರವಿಯಿಂದ ದೇವಿರಮ್ಮನ ದರ್ಶನ: ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಬೆಟ್ಟ ಗುರುವಾರ ಬೆಟ್ಟ ಏರಿ ದೇವಿರಮ್ಮನ ದರ್ಶನ ಪಡೆದರು. ಕಳೆದ 28 ವರ್ಷಗಳಿಂದ ಸಿ.ಟಿ ರವಿ ಅವರು ಬೆಟ್ಟವನ್ನು ಏರುತ್ತಿದ್ದಾರೆ.