ಸಾರಾಂಶ
ಚಿಕ್ಕನಾಯಕನಹಳ್ಳಿ: ರಾಜ್ಯದ ಹಲವೆಡೆ ಸಂಭವಿಸುತ್ತಿರುವ ಬಾಣಂತಿ ಸಾವುಗಳ ಬೆನ್ನಲ್ಲೇ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಬಾಣಂತಿ ಮಹಿಳೆ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ.ತಾಲೂಕಿನ ಕುಪ್ಪೂರು ಗ್ರಾಮದ ಸಿಂಧು (28) ಎಂಬ ಮಹಿಳೆ ಮೃತಪಟ್ಟ ದುರ್ದೈವಿ. ಈಕೆ ಹೊಟ್ಟೆನೋವು ಹಾಗೂ ವಾಂತಿಯ ಸಮಸ್ಯೆಯ ಕಾರಣಕ್ಕೆ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಚಾಲುಕ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬುಧವಾರ ಪೋಷಕರು ಸೇರಿಸಿದ್ದರು. ಚಿಕಿತ್ಸೆ ನೀಡಿದ ಅಲ್ಲಿನ ಸಿಬ್ಬಂದಿ ಎರಡೂವರೆ ತಿಂಗಳ ಬಾಣಂತಿಯನ್ನು ಐಸಿಯುವಿನಲ್ಲಿ ಇಡಲಾಯಿತು. ಗಾಬರಿಗೊಂಡ ಷೋಷಕರು ರೋಗಿಯ ಸ್ಥಿತಿಯಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದರೂ ಸರಿಯಾಗಿ ಸ್ಪಂದಿಸಿಲ್ಲ, ಸಂಜೆಯಾಗುತ್ತಿದ್ದಂತೆ ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯಲು ಹೇಳಿದ್ದಾರೆ.
ತಕ್ಷಣವೇ ಬಾಣಂತಿಯನ್ನು ಕರೆದೊಯ್ಯುವಾಗ 10 ಕಿ.ಮೀ. ಸಾಗುವ ವಾರ್ಗದ ಕಿಬ್ಬನಹಳ್ಳಿ ಕ್ರಾಸ್ ಬಳಿ ಸಾವು ಸಂಭವಿಸಿದೆ. ಪೋಷಕರು ಹಾಗೂ ಗ್ರಾಮಸ್ಥರು ಮೃತ ದೇಹವನ್ನು ಚಾಲಕ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ನಿರ್ಲ್ಯಕ್ಷದಿಂದಾಗಿ ಆ ಸಾವು ಸಂಭವಿಸಿದೆ ತನಿಖೆ ನಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು. ವೈದ್ಯರು ಸ್ಥಳಕ್ಕೆ ಬರುವವರೆಗೂ ಜಾಗಬಿಟ್ಟು ಕದಲುವುದಿಲ್ಲ ಎಂದು ರಾತ್ರಿಯಿಡೀ ಪಟ್ಟುಹಿಡಿದು ಆಸ್ಪತ್ರೆಯ ಮುಂದೆ ಕೂತರು.ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಯತೀಶ್ ಈ ಬಗ್ಗೆ ದೂರೂ ನೀಡಿದರೆ ಮೃತ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು, ಇದರಿಂದ ತನಿಖೆಗೆ ಸಹಕಾರಿಯಾಗಲಿದೆ ಎಂದರು. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದ ಮಹಿಳೆಯ ಸಾವಿಗೆ ನ್ಯಾಯದೊರೆಯಬೇಕೆಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.