ಸಾರಾಂಶ
ಹುಬ್ಬಳ್ಳಿ: ನಾನು ಮೊದಲ ಬಾರಿ ನಾಯಕ ನಟನಾಗಿ ನಟಿಸಿರುವ ಉಪಾಧ್ಯಕ್ಷ ಚಲನಚಿತ್ರ ಜ. 26ರಂದು ರಾಜ್ಯಾದ್ಯಂತ 200 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರನಟ ಚಿಕ್ಕಣ್ಣ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 12 ವರ್ಷಗಳ ಹಿಂದೆ ಹಾಸ್ಯ ನಟ ಶರಣ ನಾಯಕ ನಟನಾಗಿ ಅಭಿನಯಿಸಿದ ಅಧ್ಯಕ್ಷ ಚಲನಚಿತ್ರದ ಮುಂದುವರಿದ ಭಾಗ ಇದಾಗಿದೆ ಎಂದರು.ಈ ವರೆಗೆ ನಾನು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕ ನಟನಾಗಿ ಅಭಿನಯಿಸಿರುವ ಉಪಾಧ್ಯಕ್ಷ ಚಲನಚಿತ್ರವನ್ನು ಕುಟುಂಬ ಸಮೇತ ಯಾವುದೇ ಮುಜುಗರವಿಲ್ಲದೇ ಪ್ರೇಕ್ಷಕರು ಬಂದು ನೋಡಬಹುದಾದ ಹಳ್ಳಿ ಸೊಗಡಿನ ಕಥಾ ಹಂದರವನ್ನೊಳಗೊಂಡ ಚಿತ್ರ. ಚಿತ್ರದಲ್ಲಿ ಒಂದೊಳ್ಳೆ ಪ್ರೇಮ ಕಥಾನಕವೂ ಇದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಜನರ ಮನಗೆದ್ದಿವೆ ಎಂದು ಹೇಳಿದರು.
ಚಲನಚಿತ್ರದ ನಿರ್ದೇಶಕ ಅನಿಲಕುಮಾರ ಮಾತನಾಡಿ, ಉಪಾಧ್ಯಕ್ಷ ಇದೊಂದು ಮನರಂಜನಾತ್ಮಕ ಚಿತ್ರವಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಚಂದ್ರಮೋಹನ ಈ ಕಥೆ ಹೇಳಿದ್ದರು. ನಂತರ ನಿರ್ಮಾಪಕ ಉಮಾಪತಿ ಅವರಿಗೆ ಕಥೆ ಹೇಳಿದಾಗ ಕಥೆಯನ್ನು ಇಷ್ಟಪಟ್ಟು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಹೆಸರನ್ನೂ ಅವರೇ ಕೊಟ್ಟಿದ್ದು, ರವಿಶಂಕರ ಗೌಡ ಅವರು ಚಿತ್ರದಲ್ಲಿ ಶಿವರುದ್ರೇಗೌಡರಾಗಿ ಪಾತ್ರ ನಿರ್ವಹಿಸಿದ್ದು, ಅಧ್ಯಕ್ಷ ಚಲನಚಿತ್ರದ ಕಥೆ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಉಪಾಧ್ಯಕ್ಷ ಚಲನಚಿತ್ರ ಕಥೆ ಆರಂಭವಾಗುತ್ತದೆ ಎಂದರು.ಡಿ.ಎನ್. ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿಗೌಡ ಈ ಚಿತ್ರ ನಿರ್ಮಿಸಿದ್ದಾರೆ. ಚಿತ್ರವನ್ನು ಮೈಸೂರು, ಮಂಡ್ಯ, ಬೆಂಗಳೂರು, ಕುದುರೆಮುಖ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಶೇಖರಚಂದ್ರ ಛಾಯಾಗ್ರಹಣ, ರಾಜಶೇಖರ ಅವರ ಸಂಭಾಷಣೆ, ಕೆ.ಎಂ. ಪ್ರಕಾಶ ಅವರ ಸಂಕಲನ, ಮೋಹನ ಕೆರೆ ಅವರ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ತಾರಾಗಣದಲ್ಲಿ ಸಾಧುಕೋಕಿಲ, ಧರ್ಮಣ್ಣ ಸೇರಿದಂತೆ ಪ್ರಮುಖ ನಟರು ನಟಿಸಿದ್ದಾರೆ ಎಂದು ಹೇಳಿದರು.
ಚಿತ್ರದ ನಾಯಕ ನಟಿ ಮಲೈಕ ಮಾತನಾಡಿ, ಉಪಾಧ್ಯಕ್ಷ ಚಲನಚಿತ್ರ ಇಡೀ ಸಿನಿಮಾ ಪ್ರೇಕ್ಷಕರನ್ನು ನಗಿಸುತ್ತದೆ. ಜೀವನದಲ್ಲಿ ಎಷ್ಟೇ ಒತ್ತಡ ಇದ್ದರೂ ಚಿತ್ರ ನೋಡಿದ ಮೇಲೆ ಒತ್ತಡ ನಿವಾರಣೆಯಾಗುತ್ತದೆ ಎಂದರು. ನಟ ಧರ್ಮಣ್ಣ, ನಾಗರಾಜ, ಶಿವಾನಂದ ಮುತ್ತಣ್ಣವರ ಇದ್ದರು.