ಚಿಕ್ಕಪುತ್ತೂರು: 29,30ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಪೂಜೆ

| Published : Apr 25 2025, 11:52 PM IST

ಚಿಕ್ಕಪುತ್ತೂರು: 29,30ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಪುತ್ತೂರಿನ ವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪೂಜಾ ಕಾರ್ಯಕ್ರಮ ೨೯ ಮತ್ತು ೩೦ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಮಡಿವಾಳ ಸಮಾಜದ ಶ್ರದ್ಧಾಕೇಂದ್ರ ಚಿಕ್ಕಪುತ್ತೂರಿನ ವೀರಭದ್ರ ಮತ್ತು ಆದಿಮಾಯೆ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಪೂಜಾ ಕಾರ್ಯಕ್ರಮ ೨೯ ಮತ್ತು ೩೦ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಬಿದಿರೆಯ ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಾದಗಳೊಂದಿಗೆ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ನೇತೃತ್ವದಲ್ಲಿ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

೨೯ರಂದು ಬೆಳಗ್ಗೆ ೯-೩೦ಕ್ಕೆ ಮಹಾಲಿಂಗೇಶ್ವರ ದೇವಳದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದೆ. ೧೧ ಗಂಟೆಗೆ ಉಗ್ರಾಣ ತುಂಬಿಸುವ ಕಾರ್ಯ ನಡೆಯಲಿದೆ. ಸಂಜೆ ೪ಕ್ಕೆ ತಂತ್ರಿಗಳ ಆಗಮನ ಅವರನ್ನು ಪೂರ್ಣಕುಂಭ ಸ್ವಾಗತ ಮಾಡಲಾಗುವುದು ಎಂದರು.

ಸಂಜೆ ೪.೩೦ರಿಂದ ಸಭಾಕಾರ್ಯಕ್ರಮ ಪುತ್ತೂರು ಮಡಿವಾಳ ಸಂಘದ ಅಧ್ಯಕ್ಷ ಪಿ.ಎನ್.ಸುಭಾಷ್ ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಸನ್ನಕುಮಾರ್ ಮಾರ್ತಾ ಮತ್ತಿತರರು ಭಾಗಿಯಾಗಲಿದ್ದಾರೆ. ಸಂಜೆ ೬ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ೯ರಿಂದ ಅನ್ನಸಂತರ್ಪಣೆ ನಡೆಯಲಿದೆ. ೩೦ರಂದು ಬೆಳಿಗ್ಗೆ ೬ರಿಂದ ಮಹಾಗಣಪತಿ ಹೋಮ, ೮ ಗಂಟೆಯ ವೃಷಭ ಲಗ್ನದಲ್ಲಿ ದೇವರ ಪ್ರತಿಷ್ಠೆ, ಆದಿಮಾಯೆ ಪ್ರತಿಷ್ಠೆ, ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಂದು ಸಂಜೆ ೩.೩೦ರಿಂದ ಸಭಾ ಕಾರ್ಯಕ್ರಮ ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಇಂದುಶೇಖರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸರಾವ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್‌ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಮುಳಿಯ ಕೇಶವ ಪ್ರಸಾದ್, ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಡಾ.ಸುರೇಶ್ ಪುತ್ತೂರಾಯ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ೬ರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಬಿ.ಇಂದುಶೇಖರ್, ಮಡಿವಾಳ ಸಂಘದ ಅಧ್ಯಕ್ಷ ಪಿ.ಎನ್.ಸುಭಾಷ್ ಚಂದ್ರ, ಉಪ್ಪಿನಂಗಡಿ ಮಡಿವಾಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಡಿವಾಳ ಹಾಗೂ ಚಿಂತನ್ ಚೊಕ್ಕಾಡಿ ಇದ್ದರು.