ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ತಾಲೂಕಿನ ಬಿಳಿಗಿರಿ ರಂಗನಬೆಟ್ಟದಲ್ಲಿ ಬುಧವಾರ ಚಿಕ್ಕ ರಥೋತ್ಸವವು ಸಂಭ್ರಮ ಸಡಗರದಿಂದ ನೆರವೇರಿತು. ಬೆಳಗ್ಗೆಯಿಂದಲೆ ತೇರಿನ ನಿಮಿತ್ತ ವಿಶೇಷ ಪೂಜೆಗಳು ನೆರವೇರಿದವು.ಅಲಂಕೃತವಾದ ತೇರಿನಲ್ಲಿ ಉತ್ಸವ ಮೂರ್ತಿಯನ್ನು ೧೧.೫೫ ರಿಂದ ೧೨.೦೬ ರ ಸಮಯದಲ್ಲಿ ಕುಳ್ಳಿರಿಸಲಾಯಿತು. ಪ್ರತಿ ತೇರಿನ ಸಂದರ್ಭದಲ್ಲೂ ಬರುವಂತೆ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ್ದು ನೆರೆದಿದ್ದ ಭಕ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಈ ಸಂದರ್ಭದಲ್ಲಿ ನೆರೆದಿದ್ದ ರಂಗಪ್ಪನ ದಾಸರು ಶಂಖ, ಜಾಗಟೆ, ನಾದಸ್ವರ, ಗೋವಿಂದಾ, ಗೋವಿಂದಾ ಎಂಬ ನಾಮಾವಳಿಯನ್ನು ಹಾಡುವ ಮೂಲಕ ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು.ತಾವು ಬೆಳೆದಿದ್ದ ಭತ್ತ, ರಾಗಿ, ಜೋಳ, ಮುಸುಕಿನಜೋಳ, ಸೇರಿದಂತೆ ವಿವಿಧ ದವಸ ಧಾನ್ಯ, ಚಿಲ್ಲರೆ ಕಾಸು, ನವದಂಪತಿಗಳು ಹಣ್ಣುಜವನ, ಚಿಲ್ಲರೆ ಕಾಸುಗಳನ್ನು ತೇರಿಗೆ ಎಸೆಯುವ ಮೂಲಕ ಪುನೀತರಾದರು. ಕೆಲವರು ಚಾಕ್ಲೆಟ್‌ಗಳನ್ನು ತೇರಿಗೆ ಎಸೆದಿದ್ದೂ ವಿಶೇಷವಾಗಿತ್ತು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು. ನಂತರ ಚಿನ್ನಾಭರಣಗಳಿಂದ ಅಲಂಕೃತವಾದ ಉತ್ಸವ ಮೂರ್ತಿಯನ್ನು ಮಂಟಪೋತ್ಸವಕ್ಕೆ ಕರೆದೊಯ್ಯಲಾಯಿತು.ಸಂಕ್ರಾಂತಿಯ ಮಾರನೇ ದಿನ ಚಿಕ್ಕ ಜಾತ್ರೆ ನಡೆದರೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ವೇಳೆ ಇಲ್ಲಿ ದಾಸಂದಿರು. ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಹಾಪರಾಕ್, ಬೋಪರಾಕ್ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕ ಜಾತ್ರೆ ಸಾಕ್ಷಿಯಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು. ದೇವರನ್ನು ಮೈಸೂರಿನ ಮಹಾರಾಜರು ನೀಡಿರುವ ಕಿರೀಟ, ರತ್ನ ಖಚಿತ ವಿವಿಧ ಆಭರಣಗಳೂ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು. ಬಸ್‌ಗಾಗಿ ಭಕ್ತರ ಪರದಾಟ, ಹಿಡಿಶಾಪ:
ಪಟ್ಟಣದಿಂದ ಬೆಟ್ಟಕ್ಕೆ ತೆರಳಲು ಬೆಳಿಗ್ಗೆ ಕೆಸ್ಸಾರ್ಟಿಸಿ ವತಿಯಿಂದ ಕಡಿಮೆ ಸಂಖ್ಯೆಯ ಬಸ್‌ಗಳು ಇತ್ತು. ಹಾಗಾಗಿ ಭಕ್ತರು ಬೆಟ್ಟಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಇಲ್ಲಿರುವ ಚಿಕ್ಕ ಬಸ್ ನಿಲ್ದಾಣದಲ್ಲೇ ಬಸ್ ಹತ್ತಿಳಿಯಲು ವ್ಯವಸ್ಥೆ ಮಾಡಿದ್ದರಿಂದ ಟ್ರಾಫಿಕ್ ಜಾಮ್‌ನ ಕಿರಿಕಿರಿ ಉಂಟಾಗಿತ್ತು. ಪ್ರತಿ ಬಾರಿಯೂ ಇದಕ್ಕಾಗಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಇರುತ್ತಿದ್ದು, ಈ ಬಾರಿ ಇದು ಇಲ್ಲದಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಮುಂದೆ ಇದನ್ನು ಸರಿಪಡಿಸುವಂತೆ ಭಕ್ತರು ಆಗ್ರಹಿಸಿದರು.ಮೊಲವನ್ನು ಹಿಡಿದು ರಂಗಪ್ಪನ ದೇಗುಲಕ್ಕೆ ಸಮರ್ಪಿಸಿದ ಭಕ್ತರು:
ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದದವರು ಮೊಲವನ್ನು ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ವಾದ್ಯ ಮೇಳ ಕೊಂಬುಗಳೊಂದಿಗೆ ಮೆರವಣಿಗೆ ಮಾಡಿ ಬಿಳಿಗಿರಿರಂಗನಬೆಟ್ಟಕ್ಕೆ ಕೊಂಡೊಯ್ದರು.ಈ ವಿಭಿನ್ನ ಪ್ರತೀತಿಯ ಹಿನ್ನೆಲೆ:
ತಿರುಪತಿಯಿಂದ ಬಂದ ನಾರಾಯಣ ಇಲ್ಲಿ ಸೋಲಿಗ ಜನಾಂಗದ ಅಲಮೇಲಮ್ಮನ ಪ್ರೀತಿಯ ಬಲೆಗೆ ಬೀಳುತ್ತಾನೆ. ಈಕೆಯನ್ನು ವರಿಸಿ ಇಲ್ಲೇ ಇರಲು ಬಯಸುತ್ತಾರೆ. ಆಗ ದೇವಾನು ದೇವತೆಗಳು ತಿಮ್ಮಪ್ಪನ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಆಗ ಬಂದ ನಾರಾಯಣನನ್ನು ಎಲ್ಲಿಗೆ ಹೋಗಿದ್ದೆ ಎಂದು ವಿಚಾರಿಸಿದಾಗ ಮೊಲವನ್ನು ಬೇಟೆಯಾಡಲು ಬಿಳಿಗಿರಿರಂಗನಬೆಟ್ಟದಲ್ಲಿರುವ ಮೊಲದ ಗಿರಿಗೆ ತೆರಳಿದ್ದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಂಡ ಎಂಬುದು ಪ್ರತೀತಿ. ಇದರ ನೆನಪಾಗಿ ಮೊಲವನ್ನು ಚಿಕ್ಕ ತೇರಿನ ದಿನ ತಾಲೂಕಿನ ವೈ.ಕೆ.ಮೋಳೆ ಗ್ರಾಮಸ್ಥರು ಬೇಟೆಯಾಡಿ ಕೊಂಡೊಯ್ಯುವ ವಾಡಿಕೆ ಇದೆ. ಬುಧವಾರ ರಾತ್ರಿ ಬಿಳಿಗಿರಿರಂಗನಬೆಟ್ಟದ ದೇಗುಲದ ಸಮೀಪದ ಕಮರಿಯಲ್ಲಿ ಮೇಲಿರುವ ದೇವಾಲಯದಲ್ಲಿ ಮೊಲಕ್ಕೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆ ಮೊಲದ ಕಾಲಿಗೆ ಬೆಳ್ಳಿಯ ಗೆಜ್ಜೆ ಕಟ್ಟಿ ಪೂಜೆ ಸಲ್ಲಿಸುವ ಮೂಲಕ ಇದನ್ನು ಬಿಡಲಾಗುತ್ತದೆ. ಈ ಮೊಲ ಯಾವ ದಿಕ್ಕಿನ ಕಡೆ ಜಿಗಿದು ಹೋಗುತ್ತದೋ ಆ ದಿಕ್ಕಿನಲ್ಲಿ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬುದು ಹಿಂದಿನಿಂದ ಬಂದ ನಂಬಿಕೆ. ಅದರಂತೆ ಹಿಂದಿನ ಕಾಲದಿಂದಲ್ಲೂ ವೈ.ಕೆ.ಮೋಳೆ ಗ್ರಾಮದ ಉಪ್ಪಾರ ಜನಾಂಗದವರು ಈ ಕಾಯಕ ಮಾಡಿ ಕೊಂಡು ಬರುತ್ತಿದ್ದಾರೆ.ಮೆರವಣಿಗೆಯಲ್ಲಿ ಯಜಮಾನರಾದ ಸೋಮಣ್ಣ, ವೆಂಕಟೇಶ್, ವೈ.ಸಿ.ಮಹದೇವಸ್ವಾಮಿ, ಕೆ. ವೆಂಕಟೇಶ್, ಕಾಮರಾಜು, ಕೆಂಪರಾಜು, ಕಾಮಶೆಟ್ಟಿ, ಲಿಂಗರಾಜು, ಪುಟ್ಟ, ವೈ.ಎನ್. ಪಾಂಡುರಂಗಶೆಟ್ಟಿ, ರಮೇಶ, ವೈ.ಆರ್. ವೆಂಕಟರಾಮು, ವೈ.ಕೆ.ಮೋಳೆ ನಾಗರಾಜು, ನಿಂಗರಾಜು, ಚಾಮರಾಜು ಹಾಗೂ ಯುವಕ ಸಂಘದ ಸದಸ್ಯರು ಸೇರಿದಂತೆ ಮುಖಂಡರುಗಳು ಹಾಜರಿದ್ದರು.