ವೈದ್ಯರಿಲ್ಲದೆ ಬಳಲುತ್ತಿದೆ ಚಿಕ್ಕೋಬನಹಳ್ಳಿ ಆರೋಗ್ಯ ಕೇಂದ್ರ

| Published : Feb 20 2025, 12:47 AM IST

ವೈದ್ಯರಿಲ್ಲದೆ ಬಳಲುತ್ತಿದೆ ಚಿಕ್ಕೋಬನಹಳ್ಳಿ ಆರೋಗ್ಯ ಕೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

10 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲ ಸೌಲಭ್ಯದ ಕೊರತೆ । ಚುಚ್ಚುಮದ್ದು ನೀಡಲು ಇಲ್ಲದ ಸಿಬ್ಬಂದಿ

ಬಿ.ಜಿ.ಕೆರೆ ಬಸವರಾಜ

ಕನ್ನಡಪ್ರಭ ವಾರ್ತೆ ಮೊಳಕಾಲ್ಮರುತಾಲೂಕಿನ ಚಿಕ್ಕೋಬನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದೊಂದು ತಿಂಗಳಿಂದ ವೈದ್ಯರು ಇಲ್ಲದೆ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದೇ ಸಮಸ್ಯೆ ಎದುರಿಸುವಂತಾಗಿದ್ದರೂ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

10 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದ್ದು, ವಿಜಯನಗರ ಜಿಲ್ಲೆ ಗಡಿಗೆ ಅಂಟಿಕೊಂಡಿದೆ. ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ.

ಕಳೆದ ಒಂದು ದಶಕದ ಹಿಂದೆ ನಿರ್ಮಾಣವಾಗಿರುವ ಈ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಸುಸಜ್ಜಿತವಾದ ಕಟ್ಟಡ ಹೊಂದಿದ್ದರೂ ಸಣ್ಣ ಪುಟ್ಟ ಖಾಯಿಲೆಗೆ ಚುಚ್ಚುಮದ್ದು ನೀಡಲು ಸಿಬ್ಬಂದಿ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯ ಸ್ಟಾಪ್ ನರ್ಸ್, ಡಿ ಗ್ರೂಪ್, ಸಿ ಎಚ್‌ಒ, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 5 ಹುದ್ದೆಗಳು ಮಂಜೂರಾತಿ ಇದ್ದರೂ ಪ್ರಸ್ತುತ ಡಿ ಗ್ರೂಪ್, ಸಿಎಚ್‌ಒ, ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಕಾರ್ಯ ನಿರ್ವಹಿಸುತ್ತಿವೆ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು ಬೇರೆ ಕಡೆ ನಿಯೋಜನೆಗೊಂಡಿರುವ ಪರಿಣಾಮ ಸಧ್ಯ ವೈದ್ಯರ ಹುದ್ದೆ ಮತ್ತು ಸ್ಟಾಪ್ ನರ್ಸ್ ಹುದ್ದೆಗಳು ಖಾಲಿ ಇದ್ದು ಚಿಕಿತ್ಸೆ ನೀಡಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ವತಃ ರೋಗಗ್ರಸ್ತವಾಗಿದೆ.

ಚಿಕ್ಕೋಬನಹಳ್ಳಿ ಗಡಿ ಗ್ರಾಮವಾಗಿದ್ದು, ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿಗೆ ವೈದ್ಯರು ಮತ್ತು ಸಿಬ್ಬಂದಿ ಬರಲು ಮುಂದಾಗುತ್ತಿಲ್ಲ. ಇದರಿಂದಾಗಿ ಜನರ ಆರೋಗ್ಯ ಕಾಪಾಡಬೇಕಾದ ಇಲ್ಲಿನ ಆಸ್ಪತ್ರೆಯು ಸೂಕ್ತ ಚಿಕಿತ್ಸೆ ಸಿಗದಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾ ಸ್ಥಿತಿ ಎದುರಾಗಿದೆ.

ಈ ಭಾಗದಲ್ಲಿ ಬಹುತೇಕ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳೇ ಹೆಚ್ಚಾಗಿ ವಾಸಮಾಡುತ್ತಿದ್ದು ಹೆಚ್ಚಿನ ಜನರು ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದಾರೆ. ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಸವಾಲುಗಳ ನಡುವೆ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಈ ಭಾಗದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಸಣ್ಣ ಕಾಯಿಲೆಗೆ ಸೂಕ್ತ ಚಿಕಿತ್ಸೆ ಸಿಗದಂತ ಸ್ಥಿತಿ ಎದುರಾಗಿದ್ದು, ತಾತ್ಕಾಲಿಕವಾಗಿ ಸ್ಟಾಪ್‌ನರ್ಸ್ ನೇಮಕ ಮಾಡಿದ್ದರೂ ಸಹ ಅದು ನೆಪಮಾತ್ರಕ್ಕೆ ಎಂಬಂತಾಗಿದೆ. ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಇನ್ನಾದರೂ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡುತ್ತಾರ ಎಂಬುದನ್ನು ಕಾದುನೋಡಬೇಕಿದೆ.