ಸಾರಾಂಶ
ಗುತ್ತಲ: ಪಟ್ಟಣಕ್ಕೆ ಚಿಕ್ಕ ಕುರವತ್ತಿ ಗ್ರಾಮದೇವತೆ ಗುರುವಾರ ರಾತ್ರಿ ಪುರಪ್ರವೇಶ ಮಾಡಿದಳು. ಈ ವೇಳೆ ಸಾಂಪ್ರದಾಯಿಕ ಪೂಜೆ ಹಾಗೂ ವಿವಿಧ ವಾದ್ಯಗಳ ಮೂಲಕ ದೇವಿಯನ್ನು ಪಟ್ಟಣದ ಜನತೆ ಸಡಗರ ಸಂಭ್ರಮ ಹಾಗೂ ಭಕ್ತಿಯಿಂದ ಸ್ವಾಗತಿಸಿದರು.
ಚಿಕ್ಕ ಕುರವತ್ತಿ ಗ್ರಾಮದೇವತೆಯ ತವರೂರು ಗುತ್ತಲ. 1954ರಲ್ಲಿ ಪಟ್ಟಣದ ಖ್ಯಾತ ಚಿತ್ರ ಕಲಾವಿದ ಹಾಗೂ ಶಿಲ್ಪಿ ರುದ್ರಯ್ಯ ವೀರಭದ್ರಯ್ಯ ಭೂಸನೂರಮಠ ಅವರು ಚಿಕ್ಕ ಕುರವತ್ತಿ ಗ್ರಾಮದೇವಿ ಮೂರ್ತಿ ನಿರ್ಮಾಣ ಮಾಡಿದ್ದರು. ಈ ವಿಷಯ ಅನೇಕರಿಗೆ ತಿಳಿದಿರಲಿಲ್ಲ. ಚಿಕ್ಕ ಕುರವತ್ತಿ ಗ್ರಾಮದಲ್ಲಿನ ದೇವಿ ಗುತ್ತಲದ ಮನೆ ಮಗಳು, ಅದನ್ನು ನಿರ್ಮಿಸಿದವರು ಗುತ್ತಲದ ರುದ್ರಯ್ಯ ವೀರಭದ್ರಯ್ಯ ಭೂಸನೂರಮಠ ಎಂಬ ವಿಷಯ ತಿಳಿದು ಅನೇಕರ ಸಂತಸಪಟ್ಟರು. ಇಷ್ಟು ವರ್ಷ ತವರಿಗೆ ಗ್ರಾಮದೇವಿಯನ್ನು ತವರಿಗೆ ಕರೇಯದೇ ಇದ್ದದ್ದು ಪ್ರಮಾದ. ಆದ್ದರಿಂದ ಅವಳನ್ನು ಕರೆ ತಂದು ತವರಮನೆಯ ಉಡುಗೊರೆಯೊಂದಿಗೆ ಸಂತಸದಿಂದ ಕಳುಹಿಸೋಣ ಎಂದು ಗುತ್ತಲ ಗ್ರಾಮಸ್ಥರು ನಿರ್ಧರಿಸಿದರು. ಹೀಗಾಗಿ ದೇವಸ್ಥಾನ ನಿರ್ಮಾಣವಾಗಿ 64 ವರ್ಷಗಳ ಬಳಿಕ 2018ರಲ್ಲಿ ಪ್ರಥಮ ಬಾರಿಗೆ ದೇವಿಯನ್ನು ತವರುಮನೆಗೆ ಕರೆತರಲಾಯಿತು. ಆಬಳಿಕ ಐದು ವರ್ಷಗಳ ಆನಂತರ ದ್ವಿತೀಯ ಬಾರಿಗೆ ದೇವಿಯನ್ನು ಮತ್ತೆ ಬರಮಾಡಿಕೊಳ್ಳಲಾಗುತ್ತಿದೆ.ಮೆರವಣಿಗೆಯಲ್ಲಿ ಮುತ್ತೈದೆಯರ ಆರತಿ, ಮಂಗಳ ವಾದ್ಯಗಳಾದ ಭೂಸನೂರಮಠ ಭಜನಾ ಮಂಡಳಿ, ನಾಸಿಕ್ ಡೋಲು, ಬೀರೇಶ್ವರ ಸಂಘದ ಡೊಳ್ಳು, ಸಮ್ಮಾಳ, ತಮಾಷಾ ಮದ್ದು ಸಹಸ್ರಾರು ಸಂಖ್ಯೆಯ ಭಕ್ತರು ಮೆರವಣಿಗೆಯ ರಂಗನ್ನು ಹೆಚ್ಚಿಸಿದವು.ಹಲವು ವಿಗ್ರಹ ನಿರ್ಮಾಣ: ನಮ್ಮ ತಂದೆಯವರ ಕಲಾ ನೈಪುಣ್ಯಕ್ಕೆ ಈ ದೇವಿ ಮೂರ್ತಿಯು ಕೈಗನ್ನಡಿಯೇ ಸರಿ. ಅವರ ಕಲೆಗೆ ಮನಸೋತವರೆ ಇಲ್ಲ ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಅವರ ನಿರ್ಮಾಣ ಮಾಡಿರುವ ಅದೆಷ್ಟೋ ಗಣೇಶನ ವಿಗ್ರಹಗಳು ಈಗಲೂ ಅನೇಕರ ಮನೆಯಲ್ಲಿ ನಿತ್ಯವೂ ಪೂಜಿಸಲ್ಪಡುತ್ತಿವೆ. ಅವರ ಚಿತ್ರ ಕಲೆಯ ಬಗ್ಗೆ ಅನೇಕ ಹಿರಿಯರೂ ಈಗಲೂ ಕೊಂಡಾಡುತ್ತಾರೆ. ಪರಿಸರಸ್ನೇಹಿ ಬಣ್ಣದ ಮೂಲಕ ಅವರು ಕಲೆಗೆ ಹೆಚ್ಚು ಮೆರುಗನ್ನು ನೀಡುತ್ತಿದ್ದರು. ನೈಸರ್ಗಿಕ ಬಣ್ಣ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದ ರುದ್ರಯ್ಯನವರು ಕರಗಳಿಂದ ನಿರ್ಮಾಣವಾದ ಅನೇಕ ಚಿತ್ರಗಳು ರಾಜ್ಯದ ನಾನಾ ಭಾಗಗಳಲ್ಲಿವೆ. ಮಠಾಧೀಶರು, ಚಿಕ್ಕ ಕುರುವತ್ತಿ ಹಾಗೂ ಪಟ್ಟಣದ ಜನತೆಯ ಸಹಕಾರದಿಂದ ಗುತ್ತಲ ತವರೂರಿನ ಮಗಳನ್ನು ಎರಡನೇ ಬಾರಿಗೆ ವಿಜೃಂಭಣೆಯಿಂದ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ರುದ್ರಯ್ಯ ಅವರ ಹಿರಿಯ ಮಗ ಅಜ್ಜಯ್ಯ ಭೂಸನೂರಮಠ ಹೇಳಿದರು.