: ಕೊಡಗಿನ ಪ್ರಮುಖ ಎರಡು ಪ್ರಮುಖ ಜಲಾಶಯಗಳಲ್ಲಿ ಒಂದು ಹಾರಂಗಿ, ಮತ್ತೊಂದು ಚಿಕ್ಲಿಹೊಳೆ ಜಲಾಶಯ. ಚಿಕ್ಲಿಹೊಳೆ ಜಲಾಶಯವನ್ನು 1980-82ರಲ್ಲಿ ಭತ್ತ ಬೆಳೆಗೆ ನೀರು ಒದಗಿಸಲು ನಿರ್ಮಿಸಿದ್ದರೂ ಉದ್ದೇಶ ಮಾತ್ರ ಈಡೇರಲಿಲ್ಲ.
ಕುಡೆಕಲ್ ಗಣೇಶ್ ಗುಡ್ಡೆಹೊಸೂರು: ಕೊಡಗಿನ ಪ್ರಮುಖ ಎರಡು ಪ್ರಮುಖ ಜಲಾಶಯಗಳಲ್ಲಿ ಒಂದು ಹಾರಂಗಿ, ಮತ್ತೊಂದು ಚಿಕ್ಲಿಹೊಳೆ ಜಲಾಶಯ. ಚಿಕ್ಲಿಹೊಳೆ ಜಲಾಶಯವನ್ನು 1980-82ರಲ್ಲಿ ಭತ್ತ ಬೆಳೆಗೆ ನೀರು ಒದಗಿಸಲು ನಿರ್ಮಿಸಿದ್ದರೂ ಉದ್ದೇಶ ಮಾತ್ರ ಈಡೇರಲಿಲ್ಲ.
ಹಳೆಯ ಎಡದಂಡೆ ನಾಲೆಯು ನಂಜರಾಯಪಟ್ಟಣ ವ್ಯಾಪ್ತಿಗೆ ಒಳಪಟ್ಟರೆ ಬಲದಂಡೆಯ ಹಳೆಯ ನಾಲೆಯ ಜೊತೆಯಲ್ಲಿ ಹೊಸದಾಗಿ ಸುಮಾರು 22 ಕಿ.ಮೀ. ಹೊಸ ನಾಲೆ ನಿರ್ಮಾಣ ಮಾಡಲಾಗಿತ್ತು. ಇದರ ಮೂಲ ಉದ್ದೇಶ ರೈತರ ಗದ್ದೆಗಳಿಗೆ, ಭತ್ತ ಬೆಳೆಯಲು ಗದ್ದೆಗಳಿಗೆ ನೀರು ಕೊಡುವುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ರೈತರು ತಮ್ಮ ಗದ್ದೆಗಳಲ್ಲಿ ಪರ್ಯಾಯ ಬೆಳೆಗಳನ್ನು ಅಲ್ಲದೆ ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲದೆ ಜಲಾಶಯ ವ್ಯಾಪ್ತಿಗೆ ಬರುವ ನೂರಾರು ಎಕರೆ ಗದ್ದೆ ಪ್ರದೇಶ ಪಾಳು ಬಿದ್ದಿವೆ.ವಿವಿಧ ಸಂಕಷ್ಟಗಳ ನಡುವೆಯೂ ಗದ್ದೆ ನಾಟಿ ಮಾಡುವ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ ಸರಿಯಾದ ಸಮಯಕ್ಕೆ ನೀರು ನೀಡದಿರುವ ಕಾರಣ ಅಧಿಕ ಮಂದಿ ಭತ್ತ ಬೇಸಾಯ ನಿಲ್ಲಿಸಿದ್ದಾರೆ.
ಅನೇಕ ವರ್ಷಗಳಿಂದ ಚಿಕ್ಲಿಹೊಳೆ ನಾಲೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಜೂನ್ ಕೊನೆಯ ವಾರದಲ್ಲಿ ಭತ್ತದ ಸಸಿಮಡಿ ತಯಾರಿಸಲು ನೀರು ಬಿಡುವುದು ವಾಡಿಕೆ. ಆದರೆ ಇದೀಗ ಆಗಸ್ಟ್ ತಿಂಗಳು ಪ್ರಾರಂಭವಾದರೂ ನಾಲೆಗಳಿಗೆ ನೀರು ಬಿಡಲು ಇಲಾಖೆಯವರು ಮುಂದಾಗುತ್ತಿಲ್ಲ. ಅಲ್ಲದೆ ರೈತರ ಜಮೀನಿಗೆ ನೀರು ಹರಿಸಲು ನಿರ್ಮಾಣಗೊಂಡ ಕಾಲುವೆಗಳು ಅರಣ್ಯ ಪ್ರದೇಶವಾಗಿದೆ. ಈ ಬಾರಿ ಮಳೆ ಕಡಿಮೆಯಾದರೂ ಜಲಾಶಯದಲ್ಲಿ ಜಲ ನೀರಿನ ಮಟ್ಟ ಅಧಿಕವಾಗಿದೆ.ಹೆಚ್ಚುವರಿ ನೀರು ಜಲಾಶಯದಿಂದ ಹೊರ ಹೋಗುವ ಸ್ಥಿತಿಯಲ್ಲಿದೆ. ಆದರೆ ಹಲವು ರೈತರು ತಮ್ಮ ಕೊಳವೆ ಬಾವಿಯ ನೀರನ್ನು ಉಪಯೋಗಿಸಿ ತಮ್ಮ ಗದ್ದೆಗಳಲ್ಲಿ ಭತ್ತದ ಸಸಿ ಮಡಿಗಳನ್ನು ತಯಾರಿಸಿಕೊಂಡಿದ್ದಾರೆ. ಆದರೆ ಗದ್ದೆಗಳಿಗೆ ನೀರು ಹರಿಯಬೇಕಾದ ಕಾಲುವೆಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಆದರೆ ಕೆಲವು ಜಲಾಶಯಗಳಿಂದ ನೀರನ್ನು ನದಿಗಳಿಗೆ ಬಿಡಲಾಗಿದೆ. ನಮ್ಮ ರೈತರಿಗೆ ಇದರಿಂದ ಪ್ರಯೋಜನ ಇಲ್ಲ.ಭತ್ತದ ಸಸಿ ಮಡಿ ತಯಾರಾಗಲು ಬಿತ್ತನೆ ಮಾಡಿದ್ದರಿಂದ ಸುಮಾರು 25 ದಿನಗಳಲ್ಲಿ ನಾಟಿ ಕಾರ್ಯ ಮಾಡಬೇಕಾಗಿದೆ. ಆದರೆ ಈ ಭಾಗದ ಹಲವು ರೈತರು ಜಲಾಶಯದ ನೀರನ್ನು ನಂಬಿಕೊಂಡಿದ್ದು. ಸರಿಯಾದ ಸಮಯಕ್ಕೆ ನಾಟಿ ಮಾಡಲು ಪರಿತಪಿಸಬೇಕಾಗಿದೆ.ಪ್ರತಿ ವರ್ಷ ಯಂತ್ರಗಳನ್ನು ಬಳಸಿ ನಾಲೆಯನ್ನು ಕಾಡು ಕಡಿದು ದುರಸ್ತಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ನಾಲೆಯ ಯಾವುದೇ ಕಾಮಗಾರಿ ನಡೆಯಲಿಲ್ಲ. ಆದರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಈ ಭಾಗದ ರೈತರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಮಳೆ ಹೆಚ್ಚಾದರೆ ನದಿ ತೀರದ ಗ್ರಾಮಗಳು ಪ್ರವಾಹದಲ್ಲಿ ಮುಳುಗಡೆಯಾಗುತ್ತವೆ. ಆದರೆ ಪುರಾತನ ಕಾಲದಿಂದಲೂ ತಮ್ಮ ಗದ್ದೆಗಳಲ್ಲಿ ಭತ್ತ ವ್ಯವಸಾಯ ಮಾಡುವ ರೈತರ ಭೂಮಿಗೆ ನೀರಿಲ್ಲ.ಸಮಸ್ಯೆಗಳನ್ನು ಸಂಬಂಧಪಟ್ಟವರು ಬಗೆಹರಿಸುವಂತೆ ಈ ಭಾಗದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿಭಟನೆ ಎಚ್ಚರಿಕೆ: ಚಿಕ್ಲಿಹೊಳೆ ಜಲಾಶಯವು ನಂಜರಾಯಪಟ್ಟಣದ ಗ್ರಾಪಂ ವ್ಯಾಪ್ತಿಗೊಳಪಡುವ ರಂಗಸಮುದ್ರ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ನಾಲೆಯ ಬಲದಂಡೆಯ ಹೊಸ ನಾಳೆಯೂ ಕುಶಾಲನಗರದ ಸುಂದರ ನಗರ ಗ್ರಾಮಕ್ಕೆ ಕೊನೆಯ ಹಂತದಲ್ಲಿ ತಲುಪಲಿದೆ. ಆದರೆ ಒಟ್ಟು 15 ಕಿ.ಮೀ. ತನಕ ಭತ್ತ ನೆಡುವ ಗದ್ದೆ ವ್ಯಾಪ್ತಿ ಇದ್ದು, ಉಳಿದ ಭಾಗದಲ್ಲಿ ಈ ಜಲಾಶಯದ ನೀರಿನ ಅವಶ್ಯಕತೆ ಇಲ್ಲ. ಆ ಭಾಗದ ರೈತರು ತಮ್ಮ ಜಾಗವನ್ನು ಮರು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದ ನಿರ್ಮಾಣ ವಾದ ಈ ಜಲಾಶಯ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಾಲೆಯ ವ್ಯಾಪ್ತಿಯ ಜಾಗ ಕಳೆದುಕೊಂಡ ರೈತರಿಗೆ ಸರಿಯಾದ ಪರಿಹಾರವನ್ನು ಇದುವರೆಗೆ ಸರ್ಕಾರ ನೀಡಲಿಲ್ಲ. ಈ ಸಂಬಂಧ ಜಮೀನು ಕಳೆದುಕೊಂಡ ಸುಂದರ ನಗರ ವ್ಯಾಪ್ತಿಯ ಎಂಡಿ ಕೃಷ್ಣಪ್ಪ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ನಮ್ಮ ತಂದೆಯ ತಂದೆಯ ಕಾಲದಿಂದಲೂ ನಾವು ನಮ್ಮ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದೇವೆ. ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜುಲೈ ತಿಂಗಳ ಪ್ರಾರಂಭದಲ್ಲಿ ಚಿಕ್ಲಿಹೊಳೆ ಜಲಾಶಯದ ಜಲಾಶಯದಿಂದ ನಮ್ಮ ಗದ್ದೆಗಳಿಗೆ ನೀರು ಹರಿಸುವ ಕಾರ್ಯ ನಡೆಸಲಾಗುತ್ತಿತ್ತು. ಅಲ್ಲದೆ ನಾಳೆಯೊಳಗೆ ಬೆಳೆದಿರುವ ಗಿಡ ಗಂಟೆಗಳನ್ನು ಕಡೆದು ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಲಾಖೆಯು ಈ ಭಾಗದ ರೈತರನ್ನು ಕಳೆಗಣಿಸುತ್ತಿದೆ. ನಾವುಗಳು ತಮ್ಮ ಕೆರೆ ಹಾಗೂ ಕೊಳವೆ ಬಾವಿಗಳ ನೀರನ್ನು ಬಳಸಿ ಸಸಿ ಮಾಡಿ ತಯಾರಿಸಿ ನೀರಿಗಾಗಿ ಕಾಯುತ್ತಿದ್ದೇವೆ.-ಕುಡೆಕಲ್ ಕುಶಾಲಪ್ಪ, ದೊಡ್ಡಬೆಟ್ಟಗೇರಿ ಗ್ರಾಮ.ತಕ್ಷಣ ಚಿಕ್ಲಿಹೊಳೆಯಿಂದ ನಾಲೆಗೆ ನೀರು ಹರಿಸಿ ನಮ್ಮ ಭತ್ತದ ಕೃಷಿ ಮಾಡಲು ಸಹಕರಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ.
- ಶಿವಕುಮಾರ್, ದೊಡ್ಡಬೆಟ್ಟಗೇರಿ ಗ್ರಾಮ