ರೈತರ ಆತ್ಮಹತ್ಯೆಯಲ್ಲಿ ರಾಜ್ಯದಲ್ಲಿ ಚಿಕ್ಕಮಗಳೂರಿಗೆ 3ನೇ ಸ್ಥಾನ

| Published : Feb 28 2024, 02:30 AM IST

ರೈತರ ಆತ್ಮಹತ್ಯೆಯಲ್ಲಿ ರಾಜ್ಯದಲ್ಲಿ ಚಿಕ್ಕಮಗಳೂರಿಗೆ 3ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಪ್ರಸಕ್ತ 2023-24ನೇ ಸಾಲಿನಲ್ಲಿ ಈವರೆಗೆ 64 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆರ್‌.ತಾರಾನಾಥ್‌ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಸಾಲ ಬಾಧೆಯಿಂದ ಪ್ರಸಕ್ತ ಸಾಲಿನಲ್ಲಿ ಈವರೆಗೆ (ಫೆಬ್ರವರಿ 23) ರಾಜ್ಯದಲ್ಲಿ 714 ಮಂದಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಹಾವೇರಿ ಜಿಲ್ಲೆ ಪ್ರಥಮ (86 ಮಂದಿ) ಸ್ಥಾನದಲ್ಲಿದ್ದರೆ, ಬೆಳಗಾವಿ ಎರಡನೇ (75) ಎರಡನೇ ಸ್ಥಾನದಲ್ಲಿದೆ. ತುಂಗಾ, ಭದ್ರಾ ಹೇಮಾವತಿ ಸೇರಿದಂತೆ ಪಂಚ ನದಿಗಳ ತವರೂರು ಚಿಕ್ಕಮಗಳೂರು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಅಂದರೆ, ಈ ಅವಧಿಯಲ್ಲಿ 64 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇಲ್ಲಿ ಅಘಾತಕಾರಿ ವಿಷಯವೆಂದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಅಂದರೆ, 2022-23ರಲ್ಲಿ 53 ಮಂದಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪ್ರಸಕ್ತ 2023-24ನೇ ಸಾಲಿನಲ್ಲಿ ಈವರೆಗೆ 64 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೈ ಕೊಟ್ಟ ಮಳೆ: ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಕೂಡ ಕೆಲವು ಸಂದರ್ಭದಲ್ಲಿ ದಿಢೀರನೆ ಸುರಿದ ಮಳೆಗೆ ರೈತರು ಬೆಳೆಯನ್ನು ಕಳೆದುಕೊಂಡರು. ಹೀಗೆ ಅತಿವೃಷ್ಠಿಯ ಜತೆಗೆ ಅನಾವೃಷ್ಟಿಯ ಪರಿಸ್ಥಿತಿಯನ್ನು ರೈತರು ಎದುರಿಸಿದರು.ಪ್ರಸಕ್ತ ಸಾಲಿನಲ್ಲಿ ಅಂದರೆ, 2023ರ ಏಪ್ರಿಲ್‌ 1 ರಿಂದ ಸೆಪ್ಟಂಬರ್‌ 8ವರೆಗೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಸಂಖ್ಯೆ 24 ಇತ್ತು. 2024ರ ಮಾರ್ಚ್‌ 23ಕ್ಕೆ ಈ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಕಳೆದ 7 ತಿಂಗಳಲ್ಲಿ 40 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಾರಿ ಮುಂಗಾರಿನಲ್ಲಿ ಮಳೆಯ ಏರುಪೇರು ಉಂಟಾಗಿತ್ತು. ಜೂನ್‌ ತಿಂಗಳಲ್ಲಿ ಮಳೆ ಪೂರ್ಣ ಪ್ರಮಾಣದಲ್ಲಿ ಕೈಕೊಟ್ಟಿತ್ತು. ಜುಲೈ ತಿಂಗಳಲ್ಲಿ ಆಶಾಕಿರಣ ಮೂಡಿಸಿದ್ದರೆ, ಆಗಸ್ಟ್‌ ತಿಂಗಳಲ್ಲೂ ಕೈ ಕೊಟ್ಟಿತು. ಹೀಗಾಗಿ ಸಕಾಲದಲ್ಲಿ ಬೆಳೆಯಲ್ಲಿ ಬೆಳೆವಣಿಗೆ ಆಗಲಿಲ್ಲ. ಅತಿವೃಷ್ಠಿಗೆ 5815 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಬಯಲುಸೀಮೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಲೆನಾಡಿನಲ್ಲಿ ಕಾಫಿ ಬೆಳೆಗಾರರು ಸಹ ಆತ್ಮಹತ್ಯೆ ಮಾಡಿಕೊಂಡರು.ಜಿಲ್ಲೆಯಲ್ಲಿ 2.17 ಲಕ್ಷ ರೈತರು: ಜಿಲ್ಲೆಯ ಬೌಗೋಳಿಕ ವಿಸ್ತರ್ಣ 722075 ಹೆಕ್ಟೇರ್‌, ಇದರಲ್ಲಿ 200485 ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಇದೆ. ಇನ್ನುಳಿದಂತೆ 1,29,080 ಹೆಕ್ಟೇರ್‌ ಕೃಷಿ ಭೂಮಿ ಇದ್ದರೆ, ಕಾಫಿ ಹಾಗೂ ಇತರೆ ಪ್ಲಾಂಟೇಷನ್‌ ಸೇರಿದಂತೆ 1,84,297 ಹೆಕ್ಟೇರ್‌ ಭೂಮಿ ಇದೆ. ಜಿಲ್ಲೆಯಲ್ಲಿ ಒಟ್ಟು 2,17,715 ಮಂದಿ ರೈತರು ಹಾಗೂ ಕಾಫಿ ಬೆಳೆ ಗಾರರು ಇದ್ದಾರೆ. ಬೆಳೆಹಾನಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಪೈಕಿ ಅತಿ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಡೂರು ತಾಲೂಕಿನಲ್ಲಿ. ಕಳೆದ ವರ್ಷ ಇದೇ ತಾಲೂಕಿನಲ್ಲಿ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿಕ್ಕಮಗಳೂರು ತಾಲೂಕು ಎರಡನೇ ಸ್ಥಾನದಲ್ಲಿದೆ. ಇದೆ. ಮಳೆ ಅವಲಂಬಿತ ಪ್ರದೇಶ ಹೆಚ್ಚಿದೆ.

ತಾಲೂಕು ಹಾಗೂ ರೈತರ ಆತ್ಮಹತ್ಯೆ ಸಂಖ್ಯೆ: ಚಿಕ್ಕಮಗಳೂರು 14, ಮೂಡಿಗೆರೆ 4, ಕೊಪ್ಪ 6, ಶೃಂಗೇರಿ 7, ಎನ್‌.ಆರ್‌.ಪುರ 4, ತರೀಕೆರೆ 2, ಅಜ್ಜಂಪುರ 2, ಕಡೂರು 5 ಒಟ್ಟಾರೆ 64 ಮಂದಿ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.