ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕರಾವಳಿಯ ಯಕ್ಷಗಾನ ಕಲೆಯ ಸವಿಯನ್ನು ಮನೆ ಮನೆಗೆ ಪರಿಚಯಿಸಲು ಧರ್ಮಸ್ಥಳ ಗ್ರಾಮದ ಕನ್ಯಾಡಿ ಏರ್ಮುಂಜೆ ಬೈಲಿನ ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಸಾದಿತ ಯಕ್ಷಗಾನ ಚಿಕ್ಕಮೇಳವು 8ನೇ ವರ್ಷದಲ್ಲಿ ಮಳೆಗಾಲದ ತಿರುಗಾಟವನ್ನು ಜೂ.2ರಂದು ಆರಂಭಿಸಿದ್ದು, ಪ್ರತಿ ದಿನ ಸಂಜೆ 6.30ರಿಂದ ರಾತ್ರಿ 11ರ ವರೆಗೆ ಧರ್ಮಸ್ಥಳ, ಉಜಿರೆ, ಬೆಳಾಲು, ಕಕ್ಕಿಂಜೆ, ಮುಂಡಾಜೆ ಮೊದಲಾದ ಗ್ರಾಮಗಳ ಮನೆಗಳಲ್ಲಿ ಕಿರು ಪೌರಾಣಿಕ ಪ್ರಸಂಗವನ್ನು ಅಭಿನಯಿಸಿ ಯಕ್ಷಗಾನ ಕಲೆಯ ಸವಿಯನ್ನುಣಿಸುತ್ತಿದೆ.ಮನೆಗಳಲ್ಲಿ ಯಕ್ಷಗಾನ ತಾಳ, ಮದ್ದಲೆಗಳ ನಾದ, ಕಾಲ್ಗೆಜ್ಜೆಗಳ ಝೇಂಕಾರ ಅನುರಣಿಸಿದರೆ ಮನೆಯಲ್ಲಿ ದುಷ್ಟ ಶಕ್ತಿ, ಸಕಲ ದೋಷಗಳು ನಿವಾರಣೆಯಾಗಿ ಸುಖ, ಶಾಂತಿ, ನೆಮ್ಮದಿ ನೆಲೆಸಿ ಇಷ್ಟಾರ್ಥ ಸಿದ್ಧಿಯಾಗುವುದೆಂಬ ಪ್ರತೀತಿಯಿದೆ. ಪೊದುಂಬಿಲ ಯಕ್ಷಗಾನ ಚಿಕ್ಕಮೇಳದಲ್ಲಿ ಭಾಗವತರಾಗಿ ಶಿವಪ್ರಸಾದ್ ಇಚ್ಲಂಪಾಡಿ, ಚೆಂಡೆಯಲ್ಲಿ ಹರಿಪ್ರಸಾದ್ ಇಚ್ಲಂಪಾಡಿ, ಮದ್ದಲೆಯಲ್ಲಿ ಲಕ್ಷ್ಮಣ ತಲಕಳ, ಪುರುಷ ಪಾತ್ರದಲ್ಲಿ ಸುರೇಶ ಕನ್ಯಾನ, ಸ್ತ್ರೀ ಪಾತ್ರದಲ್ಲಿ ಪ್ರಭಾಕರ ತೆಂಕಕಾರಂದೂರು, ಪರಿಚಾರಕರಾಗಿ ಉಮೇಶ ಮುಡಿಪು, ವ್ಯವಸ್ಥಾಪಕರಾಗಿ ಪಿ.ಜೆ.ಪ್ರಸಾದ್ ಧರ್ಮಸ್ಥಳ ಹಾಗೂ ಜೀಪ್ ಚಾಲಕರಾಗಿ ಶೀನಪ್ಪ ಗೌಡ ಅವರನ್ನೊಳಗೊಂಡ 8 ಜನರ ತಂಡ ಚಿಕ್ಕಮೇಳದ ಮಳೆಗಾಲದ ತಿರುಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ. 4-5 ತಿಂಗಳು ಗ್ರಾಮದ ಮನೆ ಮನೆಗಳಲ್ಲಿ ಕಿರು ಪೌರಾಣಿಕ ಪ್ರಸಂಗವನ್ನು ಅತ್ಯಂತ ಶ್ರದ್ಧೆಯಿಂದ ಅಭಿನಯಿಸಿ, ಮನೆಯವರು ಪ್ರೀತಿಯಿಂದ ನೀಡಿದ ಸಂಭಾವನೆಯನ್ನು ಸ್ವೀಕರಿಸಿ, ಕಾಣಿಕೆಯನ್ನು ದೇವರಿಗೆ ಅರ್ಪಿಸುವ ಮೂಲಕ ಕಲಾ ವ್ಯವಸಾಯದಲ್ಲಿ ನಿರತರಾಗಿದ್ದಾರೆ.