ಹಣಕ್ಕಾಗಿ ಪಕ್ಕದ ಮನೆ ಯುವಕನಿಂದ ಮಗು ಅಪಹರಣ

| Published : Sep 10 2024, 01:35 AM IST

ಸಾರಾಂಶ

ರಾಮನಗರ: ಹಣಕ್ಕಾಗಿ ಪಕ್ಕದ ಮನೆಯ ೫ ವರ್ಷದ ಹೆಣ್ಣುಮಗುವನ್ನು ಅಪಹರಿಸಿ ಬಾಲಕಿಯ ಕೈ-ಕಾಲು, ಬಾಯಿ ಪ್ಲಾಸ್ಟರ್‌ನಿಂದ ಕಟ್ಟಿ ಸಿಮೆಂಟ್ ಗೋದಾಮಿನಿನಲ್ಲಿ ಇರಿಸಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿರುವ ಘಟನೆ ನಗರದ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

ರಾಮನಗರ: ಹಣಕ್ಕಾಗಿ ಪಕ್ಕದ ಮನೆಯ ೫ ವರ್ಷದ ಹೆಣ್ಣುಮಗುವನ್ನು ಅಪಹರಿಸಿ ಬಾಲಕಿಯ ಕೈ-ಕಾಲು, ಬಾಯಿ ಪ್ಲಾಸ್ಟರ್‌ನಿಂದ ಕಟ್ಟಿ ಸಿಮೆಂಟ್ ಗೋದಾಮಿನಿನಲ್ಲಿ ಇರಿಸಿದ್ದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿ, ಮಗುವನ್ನು ರಕ್ಷಿಸಿರುವ ಘಟನೆ ನಗರದ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ.

ದರ್ಶನ್(೨೨) ಬಂಧಿತ. ಈತ ಹಣಕ್ಕಾಗಿ ತನ್ನ ಪಕ್ಕದ ಮನೆಯ ನಿವಾಸಿ ಸಂತೋಷ್ ಅವರ ೫ ವರ್ಷದ ಮಗಳು ವಿಶ್ಮಿತಾಳನ್ನು ಕಿಡ್ನಾಪ್‌ ಮಾಡಿ ಅರ್ಧ ಕಿಲೋ ಮೀಟರ್‌ ದೂರದಲ್ಲಿದ್ದ ಸಿಮೆಂಟ್ ಗೋದಾಮಿನಲ್ಲಿ ಅಡಗಿಸಿಟ್ಟಿದ್ದ.

ಘಟನೆ ಹಿನ್ನೆಲೆ: ಭಾನುವಾರ ರಾತ್ರಿ ಸುಮಾರು ೭.೩೦ರ ಸಮಯದಲ್ಲಿ ಬಡಾವಣೆಯ ಗಣೇಶನನ್ನು ಕೂರಿಸಿದ್ದ ಪೆಂಡಾಲ್ ಬಳಿ ಮಗು ಆಟವಾಡಿಕೊಂಡಿತ್ತು. ಮಗುವನ್ನು ನೋಡಿದ ದರ್ಶನ್, ಅಲ್ಲಿಂದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಗು ಕಾಣದ ಹಿನ್ನೆಲೆಯಲ್ಲಿ ಸಂತೋಷ್ ಗಾಬರಿಗೊಂಡಿದ್ದಾನೆ. ಇದೇ ವೇಳೆ ದರ್ಶನ್ ಇಂಟರ್‌ನೆಟ್ ಕಾಲ್‌ ಮೂಲಕ ಮಗುವಿನ ಪೋಷಕರಿಗೆ ಕರೆ ಮಾಡಿ ೨ ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದು, ಪೊಲೀಸರಿಗೆ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸುವ ಜತೆಗೆ ಗಣೇಶನ ಪೆಂಡಾಲ್ ಬಳಿ ಬಂದು ಅಲ್ಲಿದ್ದ ಯುವಕರಿಗೆ ವಿಚಾರ ತಿಳಿಸಿದ್ದು, ಎಲ್ಲರೂ ಸೇರಿ ಮಗುವಿಗಾಗಿ ಹುಡುಕಾಡಿದ್ದಾರೆ.

ಈ ವೇಳೆ ಪೆಂಡಾಲ್ ಬಳಿ ಇದ್ದ ಯುವಕರು ದರ್ಶನ್ ಮಗು ಜತೆ ಅನುಮಾಸ್ಪದವಾಗಿ ತೆರಳಿದ ವಿಚಾರ ತಿಳಿಸಿದ್ದು, ಸ್ಥಳೀಯರಿಗೆ ಗಣೇಶನ ಪೆಂಡಾಲ್ ಬಳಿಯಿಂದ ಅರ್ಧ ಕಿಲೋ ಮೀಟರ್‌ ದೂರದಲ್ಲಿದ್ದ ಬೋಳಪ್ಪನ ಕೆರೆ ಬಳಿಯ ಸಿಮೆಂಟ್ ಗೋದಾಮಿನಲ್ಲಿ ಮಗು ಪತ್ತೆಯಾಗಿದೆ.

ಪ್ಲಾಸ್ಟರ್ ಕಟ್ಟಿದ್ದ ಆರೋಪಿ:

ಮಗುವನ್ನು ಅಪಹರಿಸಿದ್ದ ಆರೋಪಿ ಮಗುವಿನ ಬಾಯಿ, ಕೈಕಾಲುಗಳನ್ನು ಪ್ಲಾಸ್ಟರ್‌ನಿಂದ ಬಿಗಿಯಾಗಿ ಕಟ್ಟಿ, ಗೋದಾಮಿನಲ್ಲಿ ಕೂಡಿಹಾಕಿದ್ದಾನೆ. ಪ್ಲಾಸ್ಟರ್ ಕಟ್ಟಿದ್ದರಿಂದ ಮಗು ಉಸಿರುಗಟ್ಟುವ ಹಂತದಲ್ಲಿದ್ದು, ಪ್ಲಾಸ್ಟರ್ ಬಿಚ್ಚಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಇದೇ ವೇಳೆ ಆರೋಪಿ ದರ್ಶನ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಾಲ ತೀರಿಸಲು ಕಿಡ್ನಾಪ್:

ಕೆಲ ತಿಂಗಳಿನಿಂದ ಮಂಜುನಾಥನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದರ್ಶನ್ ಸಾಕಷ್ಟು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮನೆ ಮಾಲೀಕರು ಸಹ ಮನೆ ಖಾಲಿ ಮಾಡುವಂತೆ ಈತನಿಗೆ ಸೂಚಿಸಿದ್ದರು. ಸಾಲ ತೀರಿಸುವ ಉದ್ದೇಶದಿಂದಲೇ ಈತ ಮಗುವನ್ನು ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ್................

ಮಗುವನ್ನು ಅಪಹರಿಸಿದ್ದ ಆರೋಪಿ ಇಂಟರ್‌ನೆಟ್ ಕರೆ ಮೂಲಕ ಪೋಷಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಕೃತ್ಯದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದಕ್ಕೆ ತನಿಖೆ ಮಾಡುತ್ತಿದ್ದು, ಈತನಿಗೆ ಯಾವುದಾದರೂ ಕ್ರಿಮಿನಲ್ ಹಿನ್ನೆಲೆ ಇದೆಯೇ ಎಂದೂ ತನಿಖೆ ಮಾಡುತ್ತಿದ್ದೇವೆ.

-ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

ಪೊಟೋ೯ಸಿಪಿಟಿ೫:

ಮಗುವನ್ನು ಪ್ಲಾಸ್ಟರ್‌ನಲ್ಲಿ ಕಟ್ಟಿ ಹಾಕಿರುವುದು.

ಪೊಟೋ೯ಸಿಪಿಟಿ೬:

ಆರೋಪಿ ದರ್ಶನ್.