ಮಕ್ಕಳ ಮೇಲೆ ದೌರ್ಜನ್ಯ: ಮೂವರು ಪುಂಡರ ಬಂಧನ, ಇಬ್ಬರಿಗಾಗಿ ಶೋಧ

| Published : Jul 26 2025, 12:00 AM IST

ಮಕ್ಕಳ ಮೇಲೆ ದೌರ್ಜನ್ಯ: ಮೂವರು ಪುಂಡರ ಬಂಧನ, ಇಬ್ಬರಿಗಾಗಿ ಶೋಧ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯದ ಅಮಲಿನಲ್ಲಿ ಬಂದ ಪುಂಡರ ಗುಂಪೊಂದು ಶಾಲೆಗೆ ನುಗ್ಗಿ ಮಕ್ಕಳ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದು ಮಧ್ಯರಾತ್ರಿಯೇ ಐವರು ಆರೋಪಿಗಳ ಪೈಕಿ, ಮೂವರನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ

ಕನ್ನಡಪ್ರಭ ವಾರ್ತೆ ಕೊಡೇಕಲ್

ಹುಣಸಗಿ ತಾಲೂಕಿನ, ಕೊಡೇಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಂಡಾವೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ, ಮದ್ಯದ ಅಮಲಿನಲ್ಲಿ ಬಂದ ಪುಂಡರ ಗುಂಪೊಂದು ಶಾಲೆಗೆ ನುಗ್ಗಿ ಮಕ್ಕಳ ಹಾಗೂ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಂದು ಮಧ್ಯರಾತ್ರಿಯೇ ಐವರು ಆರೋಪಿಗಳ ಪೈಕಿ, ಮೂವರನ್ನು ಬಂಧಿಸಿದ್ದು, ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಶುಕ್ರವಾರ ಶಾಲೆಗೆ ಭೇಟಿ ನೀಡಿದ ಯಾದಗಿರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ ತಿಳಿಸಿದ್ದಾರೆ.

ಶಾಲಾ ಶಿಕ್ಷಕರು ನೀಡಿದ ದೂರಿನಂತೆ, ಪ್ರಕರಣ ದಾಖಲಿಸಿದ್ದ ಪೊಲೀಸರು, ಆರೋಪಿಗಳ ಮೊಬೈಲ್ ನೆಟ್‌ವರ್ಕ ಆಧರಿಸಿ ಇವರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಶಾಲಾ ಶಿಕ್ಷಕರೊಬ್ಬರು ದೂರು ನೀಡಿದ್ದಾರೆಂದು ಕುಪಿತಗೊಂಡ ಆರೋಪಿತರು, ಸಂಜೆ ಅವರನ್ನು ಹಿಂಬಾಲಿಸಿ ಹಲ್ಲೆಗೆ ಯತ್ನಿಸಿರುವ ಘಟನೆಯೂ ನಡೆದಿತ್ತು. ಘಟನೆಯ ಕುರಿತು ಯಾರೂ ಕೂಡಾ ಭಯಪಡಬೇಕಾಗಿಲ್ಲ, ಶಿಕ್ಷಕರು ಎಂದಿನಂತೆ ಕಾರ್ಯನಿರ್ವಹಿಸಬಹುದು ಎಂದಿರುವ ಎಸ್ಪಿ ಪೃಥ್ವಿಕ್‌ ಶಂಕರ್‌, ಅಗತ್ಯವಿದ್ದಲ್ಲಿ ನಮ್ಮ ಪೋಲಿಸ್ ಸಹಾಯವಾಣಿಗೆ ಸಂಪರ್ಕಿಸಿ ಸೂಕ್ತ ನೆರವು ಪಡೆಯಬಹುದು ಎಂದು ತಿಳಿಸಿದರು.

ಶಾಲೆಗೆ ಭೇಟಿ ನೀಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಯಾದಗಿರಿ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಮಾತನಾಡಿ, ಘಟನೆಯಿಂದ ಸಹಶಿಕ್ಷಕ ಬಸಪ್ಪ ಅವರಿಗೆ ಮಾನಸಿಕವಾಗಿ ಘಾಸಿಯಾಗಿದ್ದು ಅವರ ಭದ್ರತೆಯ ದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಅವರ ನಿಯೋಜನೆಯನ್ನು ರದ್ದುಗೊಳಿಸಿ ಅವರ ಮೂಲ ಶಾಲೆಗೆ ವರ್ಗಾಯಿಸಲಾಗಿದ್ದು ಇನ್ನೋರ್ವ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಸೌಲಭ್ಯ ಒದಗಿಸಲು ಸೂಚನೆ: ಪುಂಡರ ದೌರ್ಜನ್ಯದ ಪ್ರಕರಣ ಹಿನ್ನೆಲೆ ಶಾಲೆಗೆ ಭೇಟಿ ನೀಡಿದ ಡಿಡಿಪಿಐ ಮಧೋಳ ಅವರು ಶಾಲೆಯ ಸಮಗ್ರ ಮಾಹಿತಿ ಪಡೆಯುವುದರೊಟ್ಟಿಗೆ, ಶಾಲೆಗೆ ಬೇಕಾದ ಕಂಪೌಂಡ್, ಕುಡಿವ ನೀರು, ಅಗತ್ಯ ಸೌಲಭ್ಯಗಳನ್ನು ಶಿಘ್ರವೇ ಒದಗಿಸಲು ಬರದೇವನಾಳ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಸುರಪುರ ಬಿಇಒ, ಯಲ್ಲಪ್ಪ ಕಾಡ್ಲೂರ, ಇಸಿಒ ಶರಣಬಸವ ಗಚ್ಚಿಮನಿ, ಸಿಆರ್‌ಪಿ ಮಹಾಂತೇಶ ರೂಪನವರ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಣಸಗಿ ತಾಲೂಕಾಧ್ಯಕ್ಷ ಕೊಟ್ರೇಶ ಕೋಳೂರ, ಸುರಪುರ ತಾಲೂಕಾಧ್ಯಕ್ಷ ಗೋವಿಂದಪ್ಪ ಟಣಕೇದಾರ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಂಬ್ರೇಶ ಮಾಲಗತ್ತಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಛಲವಾಗಿ, ಎನ್.ಜಿ.ಒ ಸದಸ್ಯರಾದ ಹಸನಸಾ ಛೌದ್ರಿ, ಭೀಮಣ್ಣ ವಾಲ್ಮೀಕಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಶಾಲೆಗೆ ಬೇಟಿ ನೀಡಿ ಶಿಕ್ಷಕರಿಗೆ ಮನೋಸ್ಥೈರ್ಯ ತುಂಬಿದರು.