ಕೋಲಾರದಲ್ಲಿ ತಾಯಿ-ಶಿಶು ಮರಣ ತಡೆಗಟ್ಟುವ ಕಾರ್ಯಾಗಾರ; ಗಮನ ಸೆಳೆದ "ಟ್ರಿಪಲ್ ಆರ್ " ಮಾದರಿ
----------ಹೆರಿಗೆ ಸಮಯದಲ್ಲಿ ತಾಯಿ ಹಾಗೂ ಜನಿಸಿದ ಮಗು ನಾಳೆಯ ಸೂರ್ಯನನ್ನು ನೋಡುವ ಹಕ್ಕಿನಿಂದ ವಂಚಿತವಾಗಬಾರದು
ತಡೆಗಟ್ಟಬಹುದಾದ ಕಾರಣಗಳಿಂದಾಗಿ ಹೆರಿಗೆಯ ವೇಳೆಯಲ್ಲಿ ತಾಯಿ ಅಥವಾ ಶಿಶು ಮರಣ ಹೊಂದಿದರೆ ಅದು ದೊಡ್ಡ ಅಪರಾಧ-----------ಕನ್ನಡಪ್ರಭ ವಾರ್ತೆ ಕೋಲಾರ
"ಒಂದು ತಾಯಿ ಸತ್ತರೆ, ಇಡೀ ಕುಟುಂಬವೇ ಸಾಯುತ್ತದೆ; ಒಂದು ಕುಟುಂಬ ಸತ್ತರೆ, ಸಮಾಜವೇ ಸಾಯುತ್ತದೆ. ಹೀಗಾಗಿ ಹೆರಿಗೆ ಸಮಯದಲ್ಲಿ ಯಾವುದೇ ತಾಯಿ ಪ್ರಾಣ ಕಳೆದುಕೊಳ್ಳಬಾರದು ಹಾಗೂ ಜನಿಸಿದ ಮಗು ನಾಳೆಯ ಸೂರ್ಯನನ್ನು ನೋಡುವ ಹಕ್ಕಿನಿಂದ ವಂಚಿತವಾಗಬಾರದು " ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕಿ ಡಾ. ರಜನಿ.ಎಂ ಮಾರ್ಮಿಕವಾಗಿ ನುಡಿದರು.
ತಾಲೂಕಿನ ಹಂಚಾಳದ ’ಜಿಯಾನ್ ಹಿಲ್ಸ್’ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ವೈದ್ಯರಿಗಾಗಿ ’ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ಕುರಿತ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.ತಾಯಿ ಮತ್ತು ಶಿಶು ಮರಣ ಪ್ರಮಾಣವು ಕೇವಲ ಅಂಕಿ-ಅಂಶಗಳಲ್ಲ, ಅದು ಇಡೀ ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಪ್ರತಿಬಿಂಬಿಸುವ ಕನ್ನಡಿಯಾಗಿದೆ. ತಡೆಗಟ್ಟಬಹುದಾದ ಕಾರಣಗಳಿಂದಾಗಿ ಗರ್ಭಿಣಿ ಅಥವಾ ಶಿಶು ಮರಣ ಹೊಂದಿದರೆ ಅದು ದೊಡ್ಡ ಅಪರಾಧ. ವೈದ್ಯರು ಹೆರಿಗೆಯ ಸಂದರ್ಭದಲ್ಲಿ ಎದುರಾಗುವ ಸಂಕೀರ್ಣತೆಗಳನ್ನು ಎದುರಿಸಲು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಬೇಕು ಹಾಗೂ ’ಗೋಲ್ಡನ್ ಮಿನಿಟ್’ ಪರಿಕಲ್ಪನೆಯಡಿ ಜನಿಸಿದ ಮಗುವಿನ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಸಮನ್ವಯದ ಕೊರತೆ ಇರುತ್ತದೆ ಎಂಬ ಸಾಮಾನ್ಯ ಮಾತಿದೆ. ಆದರೆ ಕೋಲಾರದಲ್ಲಿ ತಾಯಿ-ಶಿಶು ಮರಣ ತಡೆಯಲು ಜಾರಿಗೆ ತಂದಿರುವ ಈ "ಆರ್‌ಆರ್‌ಆರ್ " ಮಾದರಿಯು ಇಲಾಖೆಗಳ ನಡುವಿನ ಅತ್ಯುತ್ತಮ ಸಮನ್ವಯಕ್ಕೆ ಒಂದು ಶ್ರೇಷ್ಠ ಉದಾಹರಣೆ ಎಂದು ಶ್ಲಾಘಿಸಿದರು. ಆರ್.ಎಲ್.ಜಾಲಪ್ಪ ಆಸ್ಪತ್ರೆಯಂತಹ ಖಾಸಗಿ ಸಂಸ್ಥೆಗಳು ಹಾಗೂ ವೈದ್ಯರು ಅಭಿಯಾನದಲ್ಲಿ ಕೈಜೋಡಿಸಿ ಉಚಿತ ಸೇವೆ ನೀಡಲು ಮುಂದೆ ಬಂದಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಗರ್ಭಿಣಿಯರ ಆರೋಗ್ಯ ಆಶಾ ಕಾರ್ಯಕರ್ತೆಯರು ಒಂಬತ್ತು ತಿಂಗಳ ಕಾಲ ಸಂಪೂರ್ಣವಾಗಿ ಹಿಂಬಾಲಿಸಬೇಕು. ಪ್ರಸ್ತುತ ವಾಟ್ಸಾಪ್ ಗ್ರೂಪ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ಅಥವಾ ಆಪ್ ಅಭಿವೃದ್ಧಿಪಡಿಸುವ ಮೂಲಕ ವ್ಯವಸ್ಥೆ ಮತ್ತಷ್ಟು ಸುಲಭಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.ಸರ್ಕಾರಿ ಸೇವೆಯಲ್ಲಿರುವ ವೈದ್ಯರೇ ಅತ್ಯುತ್ತಮ ಪ್ರತಿಭಾವಂತರು. ವೈದ್ಯರು ರೋಗಿಗಳ ಕೇವಲ ದೈಹಿಕ ಆರೋಗ್ಯದ ಕಡೆಗಷ್ಟೇ ಅಲ್ಲದೆ, ಮಾನಸಿಕ ಆರೋಗ್ಯದ ಕಡೆಗೂ ಗಮನಹರಿಸಿ, ಮಾನವೀಯತೆಯಿಂದ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಿಎಚ್‌ಓ ಡಾ. ಜಿ. ಶ್ರೀನಿವಾಸ್, ತಾಯಿ-ಶಿಶು ಮರಣ ಪ್ರಮಾಣ ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಜಾರಿಗೆ ತರಲಾಗಿರುವ ನೂತನ ’ಟ್ರಿಪಲ್ ಆರ್’ ಮಾದರಿ ವಿವರಿಸಿದರು.ಹೆರಿಗೆಗೆ ೧.೫ ರಿಂದ ೨ ತಿಂಗಳಿರುವಾಗಲೇ ಗರ್ಭಿಣಿಯ ಆರೋಗ್ಯ ಮರು-ಪರಿಶೀಲಿಸಿ ಅಪಾಯಕಾರಿ ಅಂಶಗಳನ್ನು ಗುರುತಿಸುವುದು.
ಹೆರಿಗೆ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಗರ್ಭಿಣಿ ಹೆರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವುದರಲ್ಲಿ ಆಗುವ ವಿಳಂಬವನ್ನು ತಪ್ಪಿಸುವುದು.ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗಿದ್ದಾಗ, ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ರೋಗಿಗಳನ್ನು ತಕ್ಷಣವೇ ಶಿಫಾರಸು ಮಾಡುವುದು.
ಈ ಪ್ರಕ್ರಿಯೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸಂಪೂರ್ಣ ಬೆಂಬಲ ನೀಡಿದ್ದು, ಖಾಸಗಿ ಆಸ್ಪತ್ರೆಗಳು ಕೂಡ ರೆಫರ್ ಆದ ರೋಗಿಗಳಿಗೆ ಉಚಿತ ಸೇವೆ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಡಾ. ಶ್ರೀನಿವಾಸ್ ತಿಳಿಸಿದರು.ತಮ್ಮ ಆಡಳಿತಾತ್ಮಕ ಬೆಂಬಲದ ಮೂಲಕ ವೈದ್ಯರ ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಜಿಲ್ಲಾಧಿಕಾರಿ ಪಾತ್ರ ವೇದಿಕೆಯಲ್ಲಿದ್ದ ಗಣ್ಯರು ಮುಕ್ತಕಂಠದಿಂದ ಸ್ಮರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಚಾರಿಣಿ ಎಂ.ಎ, ಪ್ರಸ್ತುತ ತಾಯಿ ಮತ್ತು ಶಿಶು ಮರಣ ಕುರಿತ ಆರ್‌ಆರ್‌ಆರ್ ಪಕ್ಷಿನೋಟ ಮಂಡಿಸಿದರು.
ಕಾರ್ಯಕ್ರಮದಲ್ಲಿ ತಾಯಿ ಆರೋಗ್ಯ ವಿಭಾಗದ ಉಪನಿರ್ದೇಶಕ ಡಾ.ರಾಜ್ ಕುಮಾರ್, ಎಸ್‌ಎನ್‌ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೊಹಮ್ಮದ್ ಷರೀಫ್, ಆರ್‌ಎಲ್ ಜಾಲಪ್ಪ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್, ಐಎಂಎ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ.ಬೀರೇಗೌಡ ಇದ್ದರು.ಇದೇ ಸಂದರ್ಭದಲ್ಲಿ ಡಾ.ನಾರಾಯಣಸ್ವಾಮಿ, ಡಾ.ಸುನಿತ, ಡಾ.ಅಭಿಶೇಕ್ ಆರಾಧ್ಯ, ಡಾ.ನಂದಿನಿ ನೇತೃತ್ವದಲ್ಲಿ ತಜ್ಞ ವೈದ್ಯರಿಗಾಗಿ ವಿಶೇಷ ’ವೈಜ್ಞಾನಿಕ ಕಾರ್ಯಗಾರ’ ನಡೆಯಿತು.