ಮತಗಟ್ಟೆಗಳಲ್ಲಿ ಗಮನ ಸೆಳೆದ ಶಿಶು ಪಾಲನಾ ಕೇಂದ್ರಗಳು

| Published : May 09 2024, 01:03 AM IST

ಸಾರಾಂಶ

ಲೋಕಸಭಾ ಚುನಾವಣೆ ಮತದಾನಕ್ಕೆ ತಾಯಂದಿರೊಂದಿಗೆ ಬರುವ ಮಕ್ಕಳಿಗೆ ಮತಗಟ್ಟೆಗಳಲ್ಲಿ ತೆರೆಯಲಾದ ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳ ಲಾಲನೆ-ಪಾಲನೆ ಎಲ್ಲರ ಗಮನ ಸೆಳೆಯಿತು.

ಹಾವೇರಿ: ಲೋಕಸಭಾ ಚುನಾವಣೆ ಮತದಾನಕ್ಕೆ ತಾಯಂದಿರೊಂದಿಗೆ ಬರುವ ಮಕ್ಕಳಿಗೆ ಮತಗಟ್ಟೆಗಳಲ್ಲಿ ತೆರೆಯಲಾದ ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳ ಲಾಲನೆ-ಪಾಲನೆ ಎಲ್ಲರ ಗಮನ ಸೆಳೆಯಿತು. ತಿಳವಳ್ಳಿ, ಕರೂರ, ಕಡಕೋಳ, ಒಳಗೊಂಡಂತೆ ವಿವಿಧ ಮತಗಟ್ಟೆಗಳಲ್ಲಿ ಶಿಶು ಪಾಲನಾ ಕೇಂದ್ರಗಳಲ್ಲಿ ತಾಯಂದಿರೊಂದಿಗೆ ಬಂದ ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು ಆಟಿಕೆಗಳನ್ನು ನೀಡಿ ಮಕ್ಕಳನ್ನು ಸಂತೈಸುತ್ತಿರುವುದು ಹಾಗೂ ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿ ಪಾಲನೆ ಮಾಡುತ್ತಿರುವ ದೃಶ್ಯ ಗಮನ ಸೆಳೆಯಿತು.ಈ ಬಾರಿ ೮೫ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರಿಗೆ ಮನೆಯಲ್ಲೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ಬಹುಪಾಲು ಮತಗಟ್ಟೆಗಳಲ್ಲಿ ಪ್ರತಿ ಚುನಾವಣೆಗಳಲ್ಲಿ ಕಂಡುಬರುತ್ತಿದ್ದ ವೃದ್ಧರನ್ನು ಎತ್ತಿಕೊಂಡು ಬರುವ ದೃಶ್ಯ, ದ್ವಿಚಕ್ರ, ತ್ರಿಚಕ್ರ ವಾಹನದಲ್ಲಿ ಕರೆತರುವ ದೃಶ್ಯಗಳು ವಿರಳವಾಗಿದ್ದವು. ವಯೋವೃದ್ಧರು, ಗರ್ಭಿಣಿಯರು, ಮಹಿಳೆಯರು ಹಾಗೂ ವಿಶೇಷಚೇತನರಿಗೆ ಸರತಿ ಸಾಲಿನ ಬದಲು ನೇರವಾಗಿ ಮತದಾನಕ್ಕೆ ಅವಕಾಶ ನೀಡುತ್ತಿರುವುದು ಕಂಡುಬಂದಿತು.

ಮತಗಟ್ಟೆ ವಿಶೇಷ: ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ನೂರಕ್ಕೂ ಹೆಚ್ಚು ಮತಗಟ್ಟೆ ಎದುರು ಶ್ಯಾಮಿಯಾನ ಹಾಕಿ ತಾತ್ಕಾಲಿಕ ವಿಶ್ರಾಂತಿ ಟೆಂಟ್ ನಿರ್ಮಿಸಿದ್ದು ಕಂಡುಬಂದಿತು. ವಿಶೇಷವಾಗಿ ಅಲಂಕರಿಸಲಾದ ಥೀಮ್ ಬೇಸ್ ಮತಗಟ್ಟೆಗಳು ಎಲ್ಲರ ಗಮನ ಸೆಳೆದವು. ಹಾವೇರಿ ನಗರದ ವಿದ್ಯಾನಗರದ ಮತಗಟ್ಟೆ ಸಂಖ್ಯೆ ೨೧೪ ಹಚ್ಚಹಸುರಿನಿಂದ ಕಂಗೊಳಿಸುತ್ತಿತ್ತು. ವಿಶೇಷವಾಗಿ ತೆಂಗಿನ ಗರಿಯಿಂದ ಹಂದರ, ಮಾವಿನ ತೋರಣ, ಬಿದಿರಿನ ಚಿತ್ತಾರ, ಹೂವುಗಳಿಂದ ಅಂದವಾಗಿ ಅಲಂಕರಿಸಲಾಗಿತ್ತು. ಪಾರಂಪರಿಕ ಉಡುಗೆ ಧರಿಸಿದ ಸ್ವಯಂ ಸೇವಕರು ಮತದಾರರನ್ನು ಸ್ವಾಗತಿಸುತ್ತಿರುವುದು ಎಲ್ಲರ ಗಮನ ಸೆಳೆಯಿತು.ವಿಶೇಷವಾಗಿ ಮಹಿಳೆಯರಿಗೆ, ವಿಕಲಚೇತನರಿಗೆ, ಯುವ ಮತದಾರರಿಗೆ ವಿಶೇಷ ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಈ ಮತಗಟ್ಟೆಗಳನ್ನು ಪಿಂಕ್ ಬಲೂನ್ ಹಾಗೂ ಅಲಂಕಾರಿಕ ವಸ್ತುಗಳಿಂದ ಸಜ್ಜುಗೊಳಿಸಲಾದ ಬಹುವರ್ಣದ ಮತಗಟ್ಟೆಗಳು ಎಲ್ಲರ ಗಮನಸೆಳೆದವು.ಮತದಾರರಿಗೆ ಸಹಾಯ: ಮತದಾನ ಮಾಡಲು ಮತಗಟ್ಟೆಗೆ ಬರುವ ಹಿರಿಯ ನಾಗರಿಕರಿಗೆ ಹಾಗೂ ವಿಶೇಷಚೇತನರಿಗೆ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಅದೇ ರೀತಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಮತಗಟ್ಟೆಗಳಲ್ಲಿ ಮತದಾನ ಸಹಾಯವಾಣಿ ಆರಂಭಿಸಿ ಮತದಾರರಿಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡುತ್ತಿರುವುದು ಕಂಡುಬಂದಿತು.