ಮಗುವಿನ ಪಾಲನಾ ಹಕ್ಕು ಎನ್ನುವುದು ಒಬ್ಬ ಪೋಷಕರಿಗೆ ನೀಡುವ ಬಹುಮಾನವೂ ಅಲ್ಲ ಅಥವಾ ಇನ್ನೊಬ್ಬ ಪೋಷಕರಿಗೆ ವಿಧಿಸುವ ಶಿಕ್ಷೆಯೂ ಅಲ್ಲ. ಅದು ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಪೋಷಕರೊಬ್ಬರಿಗೆ ವಹಿಸಿಕೊಡಲಾದ ಜವಾಬ್ದಾರಿ. ಅದನ್ನು ಕೇವಲ ಆರ್ಥಿಕ ಸಂಪನ್ಮೂಲ ಅಥವಾ ಭೌತಿಕ ಸೌಕರ್ಯಗಳ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಪ್ರಕರಣವೊಂದರಲ್ಲಿ ಮಗುವನ್ನು ಯುನೈಟೆಡ್‌ ಕಿಂಗ್‌ಡಮ್‌ಗೆ (ಯುಕೆ) ಕರೆದೊಯ್ಯಲು ತಾಯಿಗೆ ಅನುಮತಿ ನೀಡಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಗುವಿನ ಪಾಲನಾ ಹಕ್ಕು ಎನ್ನುವುದು ಒಬ್ಬ ಪೋಷಕರಿಗೆ ನೀಡುವ ಬಹುಮಾನವೂ ಅಲ್ಲ ಅಥವಾ ಇನ್ನೊಬ್ಬ ಪೋಷಕರಿಗೆ ವಿಧಿಸುವ ಶಿಕ್ಷೆಯೂ ಅಲ್ಲ. ಅದು ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಪೋಷಕರೊಬ್ಬರಿಗೆ ವಹಿಸಿಕೊಡಲಾದ ಜವಾಬ್ದಾರಿ. ಅದನ್ನು ಕೇವಲ ಆರ್ಥಿಕ ಸಂಪನ್ಮೂಲ ಅಥವಾ ಭೌತಿಕ ಸೌಕರ್ಯಗಳ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಪ್ರಕರಣವೊಂದರಲ್ಲಿ ಮಗುವನ್ನು ಯುನೈಟೆಡ್‌ ಕಿಂಗ್‌ಡಮ್‌ಗೆ (ಯುಕೆ) ಕರೆದೊಯ್ಯಲು ತಾಯಿಗೆ ಅನುಮತಿ ನೀಡಿದೆ.

ಪತಿಯ ಆಕ್ಷೇಪದಿಂದ ಮಗುವನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲಾಗದೆ, ಅಲ್ಲಿನ ವೈದ್ಯ ವೃತ್ತಿಯನ್ನು ಬಿಟ್ಟು ಭಾರತದಲ್ಲಿ ನೆಲೆಸಲೂ ಆಗದೆ ತೀವ್ರ ತೊಳಲಾಟಕ್ಕೆ ಸಿಲುಕಿದ್ದ ಮಹಿಳೆಗೆ ನ್ಯಾಯಾಲಯ ಈ ಮೂಲಕ ನೆಮ್ಮದಿ ನೀಡಿದೆ.

ಬೆಂಗಳೂರಿನಲ್ಲಿ ನೆಲೆಸಿದ್ದ ಪತ್ನಿ, ಅಪ್ರಾಪ್ತ ಮಗನನ್ನು ಯುಕೆಗೆ ಕರೆದೊಯ್ದು ನೆಲೆಸಲು ಅನುಮತಿ ನೀಡಿದ್ದ ಮತ್ತು ಮಗನ ವೀಸಾ ಪಡೆಯಲು ಯುಕೆ ಕಾನ್ಸಲೇಟ್‌ ಮುಂದೆ ಒಪ್ಪಿಗೆ ಸೂಚಿಸುವಂತೆ ತನಗೆ ನಿರ್ದೇಶಿಸಿ 2025ರ ಏ.16ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ ಆದೇಶ ರದ್ದು ಕೋರಿ ಮುಂಬೈನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಗ ನನ್ನೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾನೆ. ಆತನನ್ನು ಪೋಷಿಸಲು ಸಾಕಷ್ಟು ಆರ್ಥಿಕ ಸಾಮರ್ಥ್ಯ ಹೊಂದಿದ್ದೇನೆ. ಯುಕೆಗೆ ಹೋದರೆ, ಮಗನೊಂದಿಗೆ ಸಮಯ ಕಳೆಯಲಾಗುವುದಿಲ್ಲ ಎಂದು ವಾದಿಸಿದ್ದರು.

ಷರತ್ತು ವಿಧಿಸಿ ಅವಕಾಶ:

ಈ ವಾದ ಒಪ್ಪದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠ, ತಂದೆಯು ಯುಕೆಯಿಂದ ಮಗನೊಂದಿಗೆ ದೂರವಾಣಿ ಹಾಗೂ ವಿಡಿಯೋ ಕರೆಗಳ ಮೂಲಕ ನಿತ್ಯ 20 ನಿಮಿಷ ಮಾತನಾಡಲು, ಶಾಲಾ ರಜಾದಿನಗಳಲ್ಲಿ ಶೇ.75ರಷ್ಟು ಭಾಗವನ್ನು ತಂದೆಯ ಜತೆಗೆ ಭಾರತದಲ್ಲೇ ಸಮಯ ಕಳೆಯಲು ಸಹಕರಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಿ, ಮಗನನ್ನು ಯುಕೆಗೆ ಕರೆದೊಯ್ಯಲು ತಾಯಿಗೆ ಅನುಮತಿಸಿದೆ.

ಭಿನ್ನಾಭಿಪ್ರಾಯದಿಂದ ಪತಿ-ಪತ್ನಿ 7 ವರ್ಷಗಳಿಂದ ಭಾರತದಲ್ಲಿ ಪ್ರತ್ಯೇಕವಾಗಿ ನೆಲೆಸಿದ ದಿನದಿಂದಲೂ ಅಪ್ರಾಪ್ತ ಮಗನ ಪಾಲನೆ-ಪೋಷಣೆಯನ್ನು ತಾಯಿಯೇ ನೋಡಿಕೊಳ್ಳುತ್ತಿದ್ದರು. 2025ರ ಅ.22ರಿಂದ ಮಗುವಿನ ತಾಯಿ ಲಂಡನ್‌ನಲ್ಲಿ ಆಸ್ಪತ್ರೆಯಲ್ಲಿ ನೇತ್ರತಜ್ಞರಾಗಿ ವೃತ್ತಿ ನಡೆಸುತ್ತಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಮಗುವನ್ನು ತಮ್ಮೊಂದಿಗೆ ಯುಕೆಗೆ ಕರೆದೊಯ್ಯಲು ತಾಯಿ ಉದ್ದೇಶಿಸಿದ್ದರು. ಆದರೆ, ಹೊರಡಬೇಕಿದ್ದ ಸಮಯದೊಳಗೆ ಪ್ರಯಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಪ್ರಕರಣವು ಕೋರ್ಟ್‌ನಲ್ಲಿರುವ ಕಾರಣಕ್ಕೆ ಮಗುವನ್ನು ತಾತ್ಕಾಲಿಕವಾಗಿ ತನ್ನ ತಂದೆಯ (ಮಗುವಿನ ಅಜ್ಜ) ಸುಪರ್ದಿಗೆ ಒಪ್ಪಿಸಿ ಯುಕೆಗೆ ತೆರಳಿದ್ದಾರೆ. ಇಂಥ ತಾತ್ಕಾಲಿಕ ಅಗಲಿಕೆಯನ್ನು ‘ಪೋಷಕರು ಜವಾಬ್ದಾರಿ ತ್ಯಜಿಸುವುದು’ ಎಂದು ಪರಿಗಣಿಸಲಾಗದು ಎಂದು ಪೀಠ ಹೇಳಿದೆ.

ಮಗುವಿನ ಕಲ್ಯಾಣವೇ ಮುಖ್ಯ:

ಮಗುವಿನ ಶಾಶ್ವತ ಅಥವಾ ತಾತ್ಕಾಲಿಕ ಪಾಲನಾ ಹಕ್ಕು ಬಗ್ಗೆ ನಿರ್ಧರಿಸುವಾಗ ಯಾವ ಪೋಷಕರಿಗೆ ಮಗುವಿನ ಮೇಲೆ ಹೆಚ್ಚಿನ ಅಥವಾ ಬಲವಾದ ಹಕ್ಕು ಇದೆ ಎಂಬುದನ್ನು ನಿರ್ಧರಿಸುವುದು ಕೋರ್ಟಿನ ಉದ್ದೇಶವಲ್ಲ. ಮಗುವಿನ ಕಲ್ಯಾಣವೇ ಅತ್ಯಂತ ಪ್ರಮುಖ ಪರಿಗಣನೆಯಾಗಿದೆ. ಮಗುವಿನ ಪಾಲನಾ ಹಕ್ಕು ಎನ್ನುವುದು ಒಬ್ಬ ಪೋಷಕರಿಗೆ ನೀಡುವ ಬಹುಮಾನವೂ ಅಲ್ಲ ಅಥವಾ ಇನ್ನೊಬ್ಬ ಪೋಷಕರಿಗೆ ವಿಧಿಸುವ ಶಿಕ್ಷೆಯೂ ಅಲ್ಲ. ಇದು ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಪೋಷಕರೊಬ್ಬರಿಗೆ ವಹಿಸಿಕೊಡಲಾದ ಜವಾಬ್ದಾರಿ. ಅದನ್ನು ಕೇವಲ ಆರ್ಥಿಕ ಸಂಪನ್ಮೂಲ ಅಥವಾ ಭೌತಿಕ ಸೌಕರ್ಯಗಳ ಮಾನದಂಡದಿಂದ ಮಾತ್ರ ಅಳೆಯಲು ಸಾಧ್ಯವಿಲ್ಲವೆಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಒಬ್ಬ ಪೋಷಕರು ಆರ್ಥಿಕವಾಗಿ ಸುಭದ್ರರಾಗಿರಬಹುದು. ಸೂಕ್ತ ವಸತಿ ಸೌಕರ್ಯ ಹೊಂದಿರಬಹುದು. ಅತ್ಯುತ್ತಮ ಶೈಕ್ಷಣಿಕ ಸೌಲಭ್ಯ ಒದಗಿಸಲು ಸಿದ್ಧರಿರಬಹುದು. ಇವು ಪರಿಗಣಿಸಬೇಕಾದ ಅಂಶಗಳಾಗಿದ್ದರೂ, ಕೇವಲ ಅವುಗಳ ಆಧಾರದ ಮೇಲೆಯೇ ಮಗುವಿನ ಪಾಲನಾ ಹಕ್ಕು ನಿರ್ಧರಿಸುವುದು ಮಗುವಿಗೆ ಹಿತಕರವಲ್ಲ. ಮಗುವನ್ನು ನಿತ್ಯ ಆರೈಕೆ ಮಾಡುವ ಮುಖ್ಯ ವ್ಯಕ್ತಿಯೊಂದಿಗೆ ಬೆಳೆದಿರುವ ಭಾವನಾತ್ಮಕ ಬಾಂಧವ್ಯ, ಆರೈಕೆಯಲ್ಲಿನ ನಿರಂತರತೆ ಮತ್ತು ಈಗಿರುವ ವ್ಯವಸ್ಥೆ ಬದಲಾಯಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳು ಕೂಡ ಅಷ್ಟೇ ಮುಖ್ಯವಾಗಿ ಪರಿಗಣಿಸಬೇಕು. ತಂದೆ-ತಾಯಿ ಬೇರ್ಪಟ್ಟರೂ, ಮಗುವಿಗೆ ಅವರಿಬ್ಬರ ಪ್ರೀತಿ ಮತ್ತು ಸಾಂಗತ್ಯದ ಅಗತ್ಯವಿರುತ್ತದೆ. ಅವರಿಬ್ಬರೊಂದಿಗೂ ಅರ್ಥಪೂರ್ಣ ಸಂಬಂಧ ಮುಂದುವರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಕೋರ್ಟ್‌ನ ಜವಾಬ್ದಾರಿ. ಇದರಿಂದ ಮಗನನ್ನು ಯುಕೆಗೆ ಕರೆದೊಯ್ಯಲು ತಾಯಿಗೆ ಅನುಮತಿಸಲಾಗುತ್ತಿದೆ. ಮಗನು ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಾಯಿ ಸಹಕಾರ ನೀಡಬೇಕು ಎಂದು ಇದೇ ವೇಳೆ ಪೀಠ ಆದೇಶಿಸಿದೆ.