ಅದ್ಧೂರಿ ಮೆರವಣಿಗೆಯಲ್ಲಿ ಬಾಲರೂಪಿ ಗಣೇಶ ವಿಸರ್ಜನೆ

| Published : Aug 30 2025, 01:01 AM IST

ಅದ್ಧೂರಿ ಮೆರವಣಿಗೆಯಲ್ಲಿ ಬಾಲರೂಪಿ ಗಣೇಶ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈದಾನದಿಂದ ಗಣೇಶ ಹೊರ ಬರುತ್ತಲೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು

ಹುಬ್ಬಳ್ಳಿ: ಇಲ್ಲಿನ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಮೂರು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಸಡಗರ ಸಂಭ್ರಮದಿಂದ ವಿಸರ್ಜಿಸಲಾಯಿತು. ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಳೆಗಟ್ಟಿತ್ತು. ಶ್ರೀರಾಮ ಹಾಗೂ ಶ್ರೀ ಹನುಮಾನ ಪ್ರತಿಕೃತಿಯ ಬೃಹತ್‌ ಮೂರ್ತಿಗಳು ಮೆರವಣಿಗೆಗೆ ಮೆರುಗು ತಂದವು.

ಮಧ್ಯಾಹ್ನ 12ರ ವೇಳೆಗೆ ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್ ಮೂಲಕ ಮೈದಾನದಿಂದ ಹೊರ ತಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿಲ್ಲಿಸಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡುವ ಕಾರ್ಯಕ್ರಮ ಜರುಗಿತು.

ಮಧ್ಯಾಹ್ನ 1.30ಗಂಟೆ ವೇಳೆಗೆ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಆರಂಭಗೊಂಡ ಮೆರವಣಿಗೆ ರಾತ್ರಿ 8ರವರೆಗೂ ನಡೆಯಿತು. ಚೆನ್ನಮ್ಮ ಸರ್ಕಲ್, ನಿಲಿಜಿನ್ ರಸ್ತೆ, ಹೊಸೂರ ಸರ್ಕಲ್ ಮಾರ್ಗವಾಗಿ ಇಂದಿರಾಗ್ಲಾಸ್‌ ಬಾವಿವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ತಾಳ ಮದ್ದಳೆ, ಝಾಂಜ್, ಡೊಳ್ಳು, ಕರಡಿ ಮಜಲು, ನಾಸಿಕ್ ಡೋಲ್ ಹೀಗೆ ಹಲವು ಬಗೆಯ ವಾದ್ಯ ಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.

ಮೈದಾನದಿಂದ ಗಣೇಶ ಹೊರ ಬರುತ್ತಲೆ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೆರವಣಿಗೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿಪಿ, ಎಸಿಪಿ, ಇನ್ಸಪೆಕ್ಟರ್‌ಗಳ ತಂಡ, ತ್ವರಿತ ಕಾರ್ಯಾಚರಣೆ ಪಡೆ, ಸಶಸ್ತ್ರ ಮೀಸಲು ಪಡೆಯ ಪೊಲೀಸರು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಟ್ರಾಫಿಕ್ ಜಾಮ್: 6 ಗಂಟೆಗೂ ಅಧಿಕ ಕಾಲ ಮೆರವಣಿಗೆ ನಡೆದ ಹಿನ್ನೆಲೆಯಲ್ಲಿ ಮಹಾನಗರದಲ್ಲೆಡೆ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಪರದಾಡಿದರು. ಕೆಲ ಕಾಲ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಉದ್ಯಮಿ ಸಿಎಚ್.ವಿಎಸ್‌ವಿ ಪ್ರಸಾದ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಸು. ರಾಮಣ್ಣ, ಉದ್ಯಮಿ ಮಹದೇವ ಕರಮರಿ, ಜಯತೀರ್ಥ ಕಟ್ಟಿ, ಸಂಜಯ ಬಡಸ್ಕರ, ಬೀರಪ್ಪ ಖಂಡೇಕರ, ಲಕ್ಷ್ಮಣ ಗಂಡಗಾಳ್ಕೇರ, ಮೀನಾಕ್ಷಿ ವಂಟಮೂರಿ, ಈಶ್ವರಗೌಡ ಪಾಟೀಲ, ಮಹೇಂದ್ರ ಕೌತಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತಾಪ್ ಚಾಲನೆ: ಮಾಜಿ ಸಂಸದ ಪ್ರತಾಪ ಸಿಂಹ್ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ, ನೆರೆದಿದ್ದ ಜನರನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡಿದರು. ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಘಟನಾವಳಿಗಳಿಂದ ಇಲ್ಲಿಯವರೆಗಿನ ನಡೆದ ಹೋರಾಟಗಳ ದಿನಗಳ ಬಗ್ಗೆ ತಿಳಿಸಿದರು.

ಈದ್ಗಾ ಮೈದಾನದಲ್ಲಿನ ಗಣೇಶೋತ್ಸವ ಅತ್ಯಂತ ಶಾಂತಿಯುತವಾಗಿ ನಡೆಯಿತು. ಸಾವಿರಾರು ಜನರು ಗಣೇಶನ ದರ್ಶನ ಪಡೆದರು. ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ, ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ನೀಡಿದ ಸಹಾಯ ಸಹಕಾರದಿಂದಲೇ ಇಷ್ಟೊಂದು ಶಾಂತಿಯುತವಾಗಿ, ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲು ಸಾಧ್ಯವಾಗಿದೆ. ಎಲ್ಲರಿಗೂ ಅಭಿನಂದನೆಗಳು ಎಂದು ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿಎಸ್‌ವಿ ಪ್ರಸಾದ ಹೇಳಿದ್ದಾರೆ.