ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ಬಾಲ್ಯವೆಂದರೆ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುವ ವಯಸ್ಸಾಗಿದ್ದು, ಜಗತ್ತನ್ನು ಅರ್ಥಮಾಡಿಕೊಳ್ಳಲಾಗದ ಆ ದಿನಗಳಲ್ಲಿ ಅವರನ್ನು ಬಾಲಕಾರ್ಮಿಕರಾಗಿ ದುಡಿಸಿ ಕೊಳ್ಳಲಾಗುತ್ತಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಸಿ. ಅರವಿಂದ ವಿಷಾದಿಸಿದರು.ಪಟ್ಟಣದ ಸಂತ ಜೊಸೇಫರ ಶಾಲೆಯಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವಾದ್ಯಂತ ಲಕ್ಷಾಂತರ ಮಕ್ಕಳು ತಮ್ಮ ಶಿಕ್ಷ ಣದ ಹಕ್ಕು, ಆರೋಗ್ಯ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು ಮಕ್ಕಳಲ್ಲಿ, ಅರ್ಧಕ್ಕಿಂತ ಹೆಚ್ಚು ಬಾಲ ಕಾರ್ಮಿಕರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದು ಅಪಾಯಕಾರಿಯಾಗಿದ್ದು, ಬಾಲ ಕಾರ್ಮಿಕರಾಗಿ ದುಡಿಸಿಕೊಂಡರೆ ಅದು ಭವಿಷ್ಯದಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದರು.ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜತೆಗೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು ಇದಕ್ಕೂ ಮೊದಲ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾರ್ಮಿಕ ಇಲಾಖೆ ಹಮ್ಮಿಕೊಂಡಿದ್ದ ಶಾಲಾಮಕ್ಕಳಿಂದ ಬಾಲ ಕಾರ್ಮಿಕ ಪದ್ದತಿ ಬಗ್ಗೆ ಪೋಷಕರಲ್ಲಿ ಜಾಗೃತಿ ಹಾಗೂ ಅರಿವು ಜಾಥಾಕ್ಕೆ ಚಾಲನೆ ನೀಡಲಾಯಿತು.ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಚಂದನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆಸ್ರಿನಾ, ತಹಸೀಲ್ದಾರ್ ಜೆ. ಸುರೇಂದ್ರ ಮೂರ್ತಿ, ಸಾಲಿಗ್ರಾಮ ತಹಸೀಲ್ದಾರ್ ಎಸ್.ಎನ್. ನರಗುಂದ ಅವರು ಬಾಲ ಕಾರ್ಮಿಕ ವಿರೋಧಿ ಕುರಿತು ಮಾತನಾಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜ್, ಪೊಲೀಸ್ ಇನ್ಸ್ ಪೆಕ್ಟರ್ ಎಸ್. ಶಿವಪ್ರಕಾಶ್, ಕಾರ್ಮಿಕ ನಿರೀಕ್ಷಣಾಧಿಕಾರಿ ಎಚ್.ಕೆ. ಗೋವಿಂದರಾಜ್, ಬಿಇಓ ಆರ್. ಕೃಷ್ಣಪ್ಪ, ಸಿಡಿಪಿಓ ಸಿ.ಎಂ. ಅಣ್ಣಯ್ಯ, ಸಂತ ಜೊಸೇಫರ ಶಾಲೆಯ ಸಂಚಾಲಕಿ ಸಿಸ್ಟರ್ ಪುಷ್ಪ, ಮುಖ್ಯ ಶಿಕ್ಷಕಿ ಸಿಸ್ಟರ್ ಘ್ಲೋಸ್ಸಿ, ಸಿಆರ್.ಪಿ ಹರಿಪ್ರಸಾದ್, ದೈಹಿಕ ಪರಿವೀಕ್ಷಕ ಕುಮಾರಸ್ವಾಮಿ, ಶಿಕ್ಷಣ ಸಂಯೋಜಕ ಸುಬ್ಬುರಾಮನ್, ಕಾರ್ಮಿಕ ಇಲಾಖೆಯ ಚಂದ್ರಕಾಂತ್ ಇದ್ದರು.