ಸಾರಾಂಶ
ಸಾಮಾಜಿಕ ಪಿಡುಗಾದ ಬಾಲ ಕಾರ್ಮಿಕ ಪದ್ಧತಿ ನಾಶವಾಗಬೇಕಾದರೆ ಶಿಕ್ಷಣವೆಂಬ ದಿವ್ಯೌಷದ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ವಿ. ದೀಪಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸಾಮಾಜಿಕ ಪಿಡುಗಾದ ಬಾಲ ಕಾರ್ಮಿಕ ಪದ್ಧತಿ ನಾಶವಾಗಬೇಕಾದರೆ ಶಿಕ್ಷಣವೆಂಬ ದಿವ್ಯೌಷದ ಅಗತ್ಯವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ವಿ. ದೀಪಾ ತಿಳಿಸಿದರು.ತಾಲೂಕಿನ ಬೆನ್ನಾಯಕನಹಳ್ಳಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ನಿರ್ಮೂಲನಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮೂಲಕ ಇಂತಹ ಪದ್ಧತಿಗಳನ್ನು ಶಮನ ಮಾಡಬಹುದಾಗಿದ್ದು, ಮಕ್ಕಳನ್ನು ಹೋಟೆಲ್, ಕೆಲವು ಕಾರ್ಖಾನೆಗಳು ಮತ್ತಿತರ ಕಡೆ ದುಡಿಸಿಕೊಳ್ಳುತ್ತಿರುವುದು ಅಪರಾಧ. ಅಂತಹ ಮಕ್ಕಳನ್ನು ಶಾಲೆಗೆ ದಾಖಲಿಸಲು ದುಡಿಯುವ ಕಾರ್ಮಿಕ ವರ್ಗ ಮಕ್ಕಳನ್ನು ಕೆಲಸಕ್ಕೆ ಹಚ್ಚದೆ ಅಕ್ಷರಸ್ಥರನ್ನಾಗಿಸುವಲ್ಲಿಯೂ ನಮ್ಮ ಸಮಿತಿ ಬೆಂಬಲವಾಗಿ ನಿಲ್ಲಲಿದೆ. ಪೋಷಕರು ಸಹ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಅವರ ಭವಿಷ್ಯವನ್ನು ನಿರ್ಮಿಸುವತ್ತ ಗಮನಹರಿಸಬೇಕು. ವಲಸೆ ಕೂಲಿ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳಲ್ಲಿ ತಮ್ಮನ್ನ ಅವಲಂಬಿಸಿರುವ ಕುಟುಂಬಗಳು ಇದ್ದು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು. ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಸಿ. ನಟರಾಜು ಮಾತನಾಡಿ, ಸರ್ಕಾರವು ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು. ಆದ್ದರಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಉಚಿತ ಕಡ್ಡಾಯ ಶಿಕ್ಷಣ, ಆಶ್ರಯ ಸಹಿತ ಶಾಲೆಗಳು, ಬಡವರಿಗೆ ಸುಲಭ ಸಾಲ ಸೌಲಭ್ಯ ಇತರೆ ಸೌಲಭ್ಯಗಳನ್ನು ನೀಡಿದ್ದು ಇವುಗಳ ಸದ್ಬಳಕೆಯಾದಲ್ಲಿ ಇಂತಹ ಅನಿಷ್ಠ ಪದ್ದತಿಗಳನ್ನು ಬೇರು ಸಹಿತ ಕಿತ್ತೊಗೆಯಬಹುದು ಎಂದರು. ಕಾರ್ಮಿಕ ನಿರೀಕ್ಷ ವೆಂಕಟೇಶ್‌ಬಾಬು ಮಾತನಾಡಿ, ಪ್ರತಿಯೊಬ್ಬ ಕಾರ್ಮಿಕನು ಇ-ಶ್ರಮ್ ಕಾರ್ಡ್ ಹೊಂದಬೇಕು. ಇದರಿಂದ ಶಿಕ್ಷಣ ಔಷಧೀಯ ವೆಚ್ಚ ಇತರ ಸೌಲಭ್ಯಗಳನ್ನು ಪಡೆಯಬಹುದು ಎಂದು ತಿಳಿಸಿದರು. ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನ, ಸುರಕ್ಷಾ ಅಧಿಕಾರಿ ಎಂ.ಡಿ. ಹಸ್‌ನೈನ್, ಎತ್ತಿನಹೊಳೆ ಪ್ರಾಜೆಕ್ಟ್ ವ್ಯವಸ್ಥಾಪಕ ಎನ್.ಜಿ. ಪ್ರಕಾಶ್, ಆರಕ್ಷಕ ಸಿಬ್ಬಂದಿ ಚೇತನ್ ಮತ್ತಿತರರಿದ್ದರು.