ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ೧೫ ವರ್ಷದ ಬಾಲಕಿಗೆ ಸುಮಾರು ೨೭ ವರ್ಷದ ಯುವಕನೊಂದಿಗೆ ಬಾಲ್ಯವಿವಾಹ ನೆರವೇರಿಸಿದ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ ೧೦೯೮ಗೆ ದೂರು ದಾಖಲಾಗಿದ್ದು, ಈ ಸಂಬಂಧ ಬಾಲಕಿಯ ಮನೆ ಭೇಟಿ ಮಾಡಲಾಗಿ ವಿವಾಹವು ನೆರವೇರಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ೮ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.ಬಾಲ್ಯವಿವಾಹವನ್ನು ನೆರವೇರಿಸಿದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ಕಲಂ ೯ ೧, ೧೧ ರಂತೆ ಯುವಕ (ಎ-೧) ಯುವಕನ ತಂದೆ (ಎ-೨) ಯುವಕನ ತಾಯಿ (ಎ-೩) ಅಪ್ರಾಪ್ತ ಬಾಲಕಿಯ ತಂದೆ (ಎ-೪), ಅಪ್ರಾಪ್ತ ಬಾಲಕಿಯ ತಾಯಿ (ಎ-೫) ಅಪ್ರಾಪ್ತ ಬಾಲಕಿಯ ಸಂಬಂಧಿಕರು (ಎ-೬, ಮತ್ತು ಎ-೭) ಬಾಲ್ಯವಿವಾಹ ನೆರವೇರಿಸಿಕೊಟ್ಟ ಪೂಜಾರಿ (ಎ-೮) ಇವರುಗಳ ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ಸಹಾಯವಾಣಿ-೧೦೯೮ ಸಂಯೋಜಕರು ಪ್ರಕರಣ ದಾಖಲಿಸಿದ್ದಾರೆ. ಬಾಲ್ಯವಿವಾಹವು ರಾಜ್ಯದ ಅಭಿವೃದ್ಧಿ ಮಾರಕವಾಗಿರುವ ಸಮಸ್ಯೆಯಾಗಿದ್ದು, ಬಾಲ್ಯವಿವಾಹವನ್ನು ತಡೆಗಟ್ಟುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯವಾಗಿರುತ್ತದೆ. ಬಾಲ್ಯವಿವಾಹವು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯವಿವಾಹವು ನಡೆದಲ್ಲಿ ತಂದೆ-ತಾಯಿ, ಸಂಬಂಧಿಕರು, ಪೂಜಾರಿಗಳು, ಕುಮ್ಮಕ್ಕು ನೀಡಿದವರು ಹಾಗೂ ಭಾಗೀದಾರರು ತಪ್ಪಿತಸ್ಥರಾಗಲಿದ್ದು, ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಕಾನೂನು ಪ್ರಕಾರ ೨ ವರ್ಷ ಜೈಲು ಹಾಗೂ ೧ ಲಕ್ಷ ರುಪಾಯಿಗಳ ದಂಡವನ್ನು ವಿಧಿಸಲು ಅವಕಾಶವಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.