ಬಾಲ್ಯ ವಿವಾಹದಿಂದ ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ

| Published : Sep 24 2025, 01:01 AM IST / Updated: Sep 24 2025, 01:02 AM IST

ಸಾರಾಂಶ

ಸರ್ಕಾರ ೨೦೦೬ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾತಿಗೊಳಿಸಿದೆ. ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ೨೦೧೬ರಲ್ಲಿ ತಿದ್ದುಪಡಿ ತಂದಿದೆ. ಅದರ ಅನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದವರಿಗೆ, ಭಾಗವಹಿಸಿದವರಿಗೆ ಮತ್ತು ಪ್ರೋತ್ಸಾಹಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ಒಂದು ₹೧ ಲಕ್ಷ ದಂಡ ವಿಧಿಸಬಹುದಾಗಿದೆ.

ಯಲಬುರ್ಗಾ: ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುವುದರಿಂದ ಅವರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹಮುಕ್ತ ಹಾಗೂ ನಿಷೇಧ ಕಾಯ್ದೆ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂಥ ಅಂಶಗಳನ್ನು ಗಮನಿಸಿದ ಸರ್ಕಾರ ೨೦೦೬ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾತಿಗೊಳಿಸಿದೆ. ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ೨೦೧೬ರಲ್ಲಿ ತಿದ್ದುಪಡಿ ತಂದಿದೆ. ಅದರ ಅನ್ವಯ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದವರಿಗೆ, ಭಾಗವಹಿಸಿದವರಿಗೆ ಮತ್ತು ಪ್ರೋತ್ಸಾಹಿಸಿದವರಿಗೆ ಕನಿಷ್ಠ ಒಂದು ವರ್ಷದಿಂದ ಎರಡು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು ಒಂದು ₹೧ ಲಕ್ಷ ದಂಡ ವಿಧಿಸಬಹುದಾಗಿದೆ ಎಂದರು.

ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳದಂತೆ ಕಿವಿಮಾತು ಹೇಳಿದರು. ಕೆಎಚ್‌ಪಿಟಿ ವತಿಯಿಂದ ಮಕ್ಕಳು ಬಾಲ್ಯವಿವಾಹ ಜಾಗೃತಿ ನಾಟಕ ಪ್ರದರ್ಶಿಸಿದರು.

ಬಾಲ್ಯ ವಿವಾಹ ಮುಕ್ತ ಹಾಗೂ ನಿಷೇಧ ಕಾಯ್ದೆ ಕುರಿತು ಜಾಗೃತಿ ಜಾಥಾ ಕುರಿತು ರಾಜ್ಯ ಸರ್ಕಾರ ಮತ್ತು ಮಕ್ಕಳ ರಕ್ಷಣಾ ಆಯೋಗ ಹಾಗೂ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಜಂಟಿ ಸಭೆ ನಡೆಸಿ, ಸೂಚಿದಾಗ್ಯೂ ಮೇಲ್ನೋಟಕ್ಕೆ ಜಾಥಾಗಳು ನಡೆದಿವೆ. ಈ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿಲ್ಲ. ಕೆಲವು ಗ್ರಾಪಂಗಳಲ್ಲಿ ಕಾಟಾಚಾರದ ಜಾಥಾ ನಡೆದಿವೆ. ಇದು ಸರಿಯಾದ ಕ್ರಮವಲ್ಲ. ಎಲ್ಲ ಪಂಚಾಯಿತಿಗಳಿಂದ ವರದಿ ಪಡೆದು ನಿರ್ಲಕ್ಷ್ಯ ವಹಿಸಿದ ಇಲಾಖೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು. ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹನುಮಂತಪ್ಪ ವಾದಿ, ಸದಸ್ಯರಾದ ತೀರ್ಥಪ್ಪ ಭಜಂತ್ರಿ, ಪಿಡಿಒ ಸೋಮಪ್ಪ ಪೂಜಾರ, ಮುಖ್ಯಶಿಕ್ಷಕ ಕಲ್ಲಯ್ಯ ಕೋಚಲಾಪುರಮಠ, ಶಿಕ್ಷಕ ನಿಂಗಪ್ಪ, ಮುಖಂಡ ಮಹಾಂತೇಶ ವಾದಿ ಇದ್ದರು.