ಬಾಲ್ಯವಿವಾಹದಿಂದ ತಾಯಿ, ಶಿಶುಮರಣ ಹೆಚ್ಚಳ: ಬಿರಾದಾರ್

| Published : Jan 22 2024, 02:20 AM IST

ಬಾಲ್ಯವಿವಾಹದಿಂದ ತಾಯಿ, ಶಿಶುಮರಣ ಹೆಚ್ಚಳ: ಬಿರಾದಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಮಕ್ಕಳ ಬಾಲ್ಯವಿವಾಹದಿಂದ ಅಶಕ್ತ ತಾಯಿಗೆ ಜನಿಸುವ ಮಗು, ಹೆರಿಗೆ ಸಮಯದಲ್ಲಿ ತೀವ್ರ ನೋವಿನಿಂದ ತಾಯಿ ಬದುಕುಳಿಯುವುದು ಕಷ್ಟ ಸಾಧ್ಯ. ಇದರಿಂದ ತಾಯಿ, ಶಿಶುಮರಣ ಪ್ರಮಾಣ ಹೆಚ್ಚಳವಾಗುತ್ತದೆ.

ಕನ್ನಡಪ್ರಭ ವಾರ್ತೆ ಶಹಾಪುರ

ದೈಹಿಕ, ಮಾನಸಿಕ ಸದೃಢಗೊಳ್ಳದ ಹೆಣ್ಣು ಮಕ್ಕಳ ಬಾಲ್ಯವಿವಾಹದಿಂದ ಅಶಕ್ತ ತಾಯಿಗೆ ಜನಿಸುವ ಮಗು, ಹೆರಿಗೆ ಸಮಯದಲ್ಲಿ ತೀವ್ರ ನೋವಿನಿಂದ ತಾಯಿ ಬದುಕುಳಿಯುವುದು ಕಷ್ಟ ಸಾಧ್ಯ. ಇದರಿಂದ ತಾಯಿ, ಶಿಶುಮರಣ ಪ್ರಮಾಣ ಹೆಚ್ಚಳವಾಗುತ್ತದೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಕ ಅಧಿಕಾರಿ ಸೋಮಶೇಖರ ಬಿರಾದಾರ್ ಹೇಳಿದರು.

ತಾಲೂಕಿನ ಕಕ್ಕಸಗೇರಾ ಸರಕಾರಿ ಪ್ರೌಢ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆ ಅಗತ್ಯ ಮೂಲಭೂತ ಸೌಲಭ್ಯ ಲಭ್ಯತೆ ಕುರಿತು ಪರಿಶೀಲಿಸಿದ ಬಳಿಕ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಹೆಣ್ಣಿಗೆ 18, ಗಂಡಿಗೆ 21ವರ್ಷ ವಿವಾಹ ವಯೋಮಿತಿ ಗುರುತಿಸಿದ್ದು, ನಿಗದಿ ಪೂರ್ವದಲ್ಲಿ ಪೋಷಕರು ಮದುವೆ ಮಾಡಿದರೆ ಬಾಲ್ಯವಿವಾಹ ಎಂದು ಪ್ರಕರಣ ದಾಖಲಿಸಿ, ಹೆಣ್ಣು ಹಾಗೂ ಗಂಡಿನ ಪೋಷಕರಿಗೆ ಜೈಲು ಶಿಕ್ಷೆ ನೀಡಿ, ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಶಾಲೆಯಲ್ಲಿ ನರೇಗಾ ಯೋಜನೆ ಒಗ್ಗೂಡಿಕೆ ಕಾಮಗಾರಿಗಳಡಿ ನಿರ್ಮಿಸಿದ ಬಾಲಕ-ಬಾಲಕೀಯರ ಶೌಚಾಲಯ ವೀಕ್ಷಿಸಿದ ಬಳಿಕ, ಬಿಸಿಯೂಟದ ದಾಸ್ತಾನು ಕೋಣೆಗೆ ತೆರಳಿ ಅಕ್ಕಿ, ಬೆಳೆ, ಮೊಟ್ಟೆ, ಹಾಲಿನ ಪುಡಿ, ಅಡುಗೆ ಎಣ್ಣೆ ಪ್ಯಾಕೆಟ್ ಹಾಗೂ ತರಕಾರಿ ಗುಣಮಟ್ಟ ಪರಿಶೀಲಿಸಿ, ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯಾಚರಣೆ ವೀಕ್ಷಿಸಿದರು.

ಶಾಲೆಯ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕುರಿತು ಮುಖ್ಯಗುರುಗಳಿಂದ ಮಾಹಿತಿ ಪಡೆದ ಅವರು, ದಾಖಲಾತಿಗೆ ಅನುಸಾರ ಮಕ್ಕಳ ಹಾಜರಾತಿ ಇರಬೇಕು. ಮಕ್ಕಳು ಶಾಲೆ ಬಿಡುತ್ತಿರುವ ಕುರಿತು ಪೋಷಕರ ಮನೆಗೆ ಭೇಟಿ ನೀಡಿ, ಇಲ್ಲವೇ ಪೋಷಕರ ಸಭೆ ಕರೆದು ಚರ್ಚಿಸಿ, ಮಕ್ಕಳು ಶಾಲೆ ಬಿಡದಂತೆ ಪೋಷಕರ ಮನವೂಲಿಸಬೇಕು. ಈ ಬಾರಿ 10ನೇ ತರಗತಿ ಫಲಿತಾಂಶದಲ್ಲಿ ಏರಿಕೆ ಕಂಡುಬರಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಣ್ಣ ಹಯ್ಯಾಳ, ಶಾಲಾ ಮುಖ್ಯಗುರು ಬಾಬು ಪೂಜಾರಿ ಸೇರಿ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.