ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ನ್ಯಾ.ಗೋಪಾಲಕೃಷ್ಣ

| Published : Nov 28 2024, 12:33 AM IST

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ನ್ಯಾ.ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಬುಧವಾರ ‘ಬಾಲ್ಯ ವಿವಾಹ ತಡೆ’ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ಎಚ್ಚರಿಸಿದ್ದಾರೆ.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಬಾಲ್ಯ ವಿವಾಹ ತಡೆ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಕ್ಷರತೆ, ಬಡತನ, ಮೂಢನಂಬಿಕೆ ಇಂತಹವುಗಳು ಬಾಲ್ಯವಿವಾಹಕ್ಕೆ ಕಾರಣ. ಬಾಲ್ಯ ವಿವಾಹ ತಡೆ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಹೇಳಿದರು.

೨೧ ವರ್ಷ ಒಳಗಿನ ಹುಡುಗ ಹಾಗು ೧೮ ವರ್ಷ ಒಳಗಿನ ಹುಡುಗಿಯರ ನಡುವಿನ ಮದುವೆ ಬಾಲ್ಯವಿವಾಹವಾಗುತ್ತದೆ. ಗಿರಿಜನರಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಜಾಗೃತಿಯ ಮೂಲಕ ಬಾಲ್ಯವಿವಾಹ ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ವಿಠಲ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ಅನೇಕ ಕಾಯಿದೆಗಳಿವೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ತಡೆ ಇನ್ನಿತರ ಕಾಯಿದೆಗಳಿವೆ. ಅದರಲ್ಲೂ ಪೋಕ್ಸೋ ಕಾಯಿದೆ ಕಠಿಣವಾಗಿದೆ. ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ದ್ವಂದ್ವಾರ್ಥದಲ್ಲಿ ಮಾತನಾಡುವುದು, ಹಿಂಬಾಲಿಸುವುದು, ಕೆಟ್ಟ ಸ್ಪರ್ಶ ಇವೆಲ್ಲವೂ ಪೋಕ್ಸೋ ಕಾಯಿದೆಯಡಿ ಬರುತ್ತವೆ. ಇಂತಹ ಕಿರುಕುಳಕ್ಕೆ ತುತ್ತಾದ ವಿದ್ಯಾರ್ಥಿನಿಯರು ಕೂಡಲೆ ಪೊಲೀಸ್ ಠಾಣಾ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದು ಹೇಳಿದರು.

ಸಮಾಜದ್ರೋಹಿಗಳು ಅಪ್ರಾಪ್ತ ಹೆಣ್ಣುಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ. ಬೈಕ್‌ಗಳಲ್ಲಿ ಹಿಂಬಾಲಿಸುತ್ತಾರೆ. ಮೊಬೈಲ್ ನಂಬರ್ ಪಡೆದು ಮೆಸೆಜ್ ಕಳುಹಿಸುತ್ತಾರೆ. ಬಣ್ಣದ ಮಾತುಗಳನ್ನಾಡುತ್ತಾರೆ. ಇದಕ್ಕೆ ಯಾರು ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಮೂಲಭೂತ ಹಕ್ಕುಗಳಿವೆ. ನಿಮ್ಮ ರಕ್ಷಣೆಗೆ ಕಾನೂನು ಇದೆ. ತಪ್ಪು ಹಾದಿ ತುಳಿಯದೆ ನಿಶ್ಚಿಂತೆಯಿಂದ ವಿದ್ಯಾಭ್ಯಾಸ ಮುಂದುವರಿಸಿ ಎಂದರು.

ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ಬಾಲ್ಯವಿವಾಹ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪೋಷಕರು ಯಾವತ್ತು ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಕೊಟ್ಟರೆ ತಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿದಂತೆ. ಬಾಲ್ಯವಿವಾಹ ತಡೆಯಲು ನಾಗರಿಕ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು. ಉಪನ್ಯಾಸಕ ಲಾಂಚನ್ ಕಾರೇಕಾರ್ ಇದ್ದರು. ಉಪನ್ಯಾಸಕರಾದ ಸೌಮ್ಯ, ಭವ್ಯ ಮತ್ತು ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.