ಸಾರಾಂಶ
ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆಯೂ ಕಾರಣ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಾಲ್ಯ ವಿವಾಹಕ್ಕೆ ಬಡತನ, ಅನಕ್ಷರತೆಯೂ ಕಾರಣ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.ತಾಲೂಕಿನ ಹಂಗಳ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಫೋಕ್ಸೋ ಕಾಯ್ದೆ ಹಾಗೂ ಬಾಲ ವಿವಾಹ ನಿಷೇಧ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಸಂವಿಧಾನದ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ್ ಜಿ.ಜೆ,ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೀಪಕ್ ಕುಮಾರ್ ಮಾತನಾಡಿದರು.
ಬಾಲ್ಯ ವಿವಾಹ ಹಿಂದಿನಷ್ಟು ಇಲ್ಲ, ಜನರಲ್ಲಿ ಜಾಗೃತಿ ಬಂದ ಕಾರಣ ಬಾಲ್ಯ ವಿವಾಹ ಕಡಿಮೆಯಾಗಿದ್ದರೂ ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಡತನದ ಬೇಗೆಯಲ್ಲಿರುವ ಜನರು ನಾನು ಬದುಕಿರೋ ತನಕ ನಮ್ಮ ಮಕ್ಕಳ ಮದುವೆ ಮಾಡಿ, ಭಾರ ಕಡಿಮೆ ಮಾಡಿಕೊಳ್ಳೋದರಿಂದ ಕೂಡ ಬಾಲ್ಯ ವಿವಾಹ ನಡೆಯುತ್ತದೆ. ಅಲ್ಲದೆ ಬಡತನ ಇರುವ ಮನೆಯಲ್ಲಿ ನಿಮ್ಮ ಮಗಳನ್ನು ನಾವೇ ಮದುವೆ ಮಾಡಿಕೊಳ್ಳುತ್ತೇವೆ ಎಂದೇಳಿ ಬಾಲ್ಯ ವಿವಾಹ ನಡೆದಿವೆ ಎಂದರು.ಮನೆಯಲ್ಲಿ ಅಕ್ಕ ಅಥವಾ ಅಣ್ಣನ ಮದುವೆ ನಡೆಯುತ್ತದೆ. ತಂಗಿ ಅಥವಾ ತಮ್ಮನಿಗೂ ಒಂದೇ ಖರ್ಚಿನಲ್ಲಿ ಮದುವೆ ನಡೆಸಿದರೆ ಖರ್ಚು ಉಳಿಯುತ್ತದೆ ಎಂಬ ಕಾರಣದ ಜೊತೆಗೆ ಪೋಷಕರು ವಲಸೆ ಹೋದಾಗ ಮನೆಯಲ್ಲಿ ಮಕ್ಕಳೊಂದಿಗೆ ಪ್ರೀತಿ ನಡೆದಾಗ ಅನಿವಾರ್ಯವಾಗಿ ಬಾಲ್ಯ ವಿವಾಹ ನಡೆದಿವೆ ಎಂದರು.
ಬಾಲ್ಯ ವಿವಾಹ ಕಡಿಮೆ ಮಾಡಲು ಶಿಕ್ಷಣೆ ಇಲ್ಲದೆ ಇರುವುದೂ ಕೂಡ ಬಹು ಮುಖ್ಯ ಕಾರಣ. ಹಾಗಾಗಿ ಶಿಕ್ಷಣ ಪಡೆದರೆ ಬಾಲ್ಯ ವಿವಾಹಕ್ಕೆ ತಡೆ ಹಾಕಲು ಸಾಧ್ಯ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬೀರೇಗೌಡ, ಕಾಲೇಜಿನ ಉಪನ್ಯಾಸಕರಾದ ಲಕ್ಷ್ಮೀ, ಪ್ರಭಾ, ತೇಜಸ್ವಿನಿ, ಅನಿಲ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಇದ್ದರು.