ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ನ್ಯಾ. ಹನುಮಂತಪ್ಪ

| Published : Sep 21 2024, 01:54 AM IST

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ : ನ್ಯಾ. ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದ್ದಾರೆ.

- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದ್ದಾರೆ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ತಾಪಂ ನಿಂದ ಶುಕ್ರವಾರ ನಗರದ ತಾಲೂಕು ಪಂಚಾಯಿತಿ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಸಂಬಂಧಿ ಕಾಯ್ದೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು, ಮಕ್ಕಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮಗು ತಾಯಿಯ ಗರ್ಭದಲ್ಲಿ ರುವಾಗಲೇ ಹಲವಾರು ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಫಲ ಪಡೆದು ಜನಿಸುತ್ತದೆ. ಮಕ್ಕಳು ದೇಶದ ಆಸ್ತಿ, ಮಕ್ಕಳು ನಂಬಿಕೆ, ನೆಮ್ಮದಿ, ಸುಖ, ಸಂತೋಷದ ಹಾಗೂ ಕಲಿಯುವ ವಾತಾವರಣದಲ್ಲಿ ಬೆಳೆದು ಬಂದರೆ ಅವರಿಗೆ ಅರ್ಥಪೂರ್ಣ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ವಾಗುತ್ತದೆ. ಹುಟ್ಟುವ ಪ್ರತಿ ಮಗುವನ್ನು ಅಕ್ಕರೆಯಿಂದ ಜಾಗರೂಕತೆಯಿಂದ ಬೆಳೆಸಿ ಎಂದರು.ಯಾವುದೇ ಮಗು ಅನಾಥರಾಗದಂತೆ, ರೋಗರುಜಿನಗಳಿಗೆ ಬಲಿಯಾಗದಂತೆ, ಅಂಗವಿಕಲವಾಗದೆ, ಎಂತಹದೇ ಪ್ರಸಂಗದಲ್ಲೂ ಮಕ್ಕಳು ಒತ್ತಡಕ್ಕೆ ಬೀಳದೆ ಬದುಕಲು, ಜೀವನ ನಡೆಸಲು, ಎಳೆ ವಯಸ್ಸಿನಲ್ಲೆ ದುಡಿಯದಂತೆ, ಭವಿಷ್ಯವಿಲ್ಲದ, ಕನಸಿಲ್ಲದವರಾಗದಂತೆ ನೋಡಿಕೊಳ್ಳುವ ಹೊಣೆ ಪ್ರತಿಯೊಬ್ಬ ಪೋಷಕರ ಜವಾಬ್ದಾರಿ ಎಂದ ಅವರು, ಮಕ್ಕಳನ್ನು ಲೈಂಗಿಕ ದೃಷ್ಟಿಯಿಂದ ನೋಡುವುದು, ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸುವುದು, ಮಕ್ಕಳೊಂದಿಗೆ ಅಶ್ಲೀಲ ಪದಗಳನ್ನಾಡುವುದು, ಮಕ್ಕಳನ್ನು ಲೈಂಗಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಈ ಕೃತ್ಯಗಳನ್ನು ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಯೊಬ್ಬ ಸಾರ್ವಜನಿಕರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಬಾಲ್ಯ ವಿವಾಹ ತಡೆಗಟ್ಟಲು ಕ್ರಮ ವಹಿಸಬೇಕು. ಮಕ್ಕಳನ್ನು ದುಡಿಮೆಯಲ್ಲಿ ತೊಡಗಿಸಿಕೊಳ್ಳದೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದ ಅವರು, ಮಹಿಳೆಯರು ಹಾಗೂ ಮಕ್ಕಳಿಗಿರುವ ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರ ಸುರಕ್ಷಿತ ಬದುಕಿಗೆ ಸಹಕಾರಿಯಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಸಂವಿಧಾನದಡಿ ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಸರ್ಕಾರ ಮಕ್ಕಳ ರಕ್ಷಣೆ ಕುರಿತು ಹಲವಾರು ಯೋಜನೆ ಜಾರಿ ಮಾಡಿದೆ ಮಕ್ಕಳು ಬೆಳೆದು ಸಮುದಾಯ, ರಾಜ್ಯ, ದೇಶವನ್ನು ಮುನ್ನಡೆಸಬೇಕೆಂಬುದು ಸರ್ಕಾರದ ಆಶಯ. ಮಕ್ಕಳು ಯಾವುದೇ ಕಿರುಕುಳ, ಅಡೆತಡೆಗಳಿಲ್ಲದೆ ಬಾಲ್ಯವನ್ನು ಅನುಭವಿಸಬೇಕು ಆಟ-ಪಾಠಗಳಲ್ಲಿ, ಶಿಕ್ಷಣ, ಓಡಾಟಗಳಲ್ಲಿ ತೊಡಗಿದಾಗ ಸಧೃಡ ಮನಸ್ಸಿನಿಂದ ಬೆಳೆಯಲು ಸಾಧ್ಯವಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಮಕ್ಕಳ ರಕ್ಷಣೆಯಲ್ಲಿ ಮುಂದಾಗಿ ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ. ತಾರಾನಾಥ್ ಮಾತನಾಡಿ, ಮಕ್ಕಳಿಗಾಗುವ ಅಡಚಣೆಗಳು, ತೊಂದರೆಗಳನ್ನು ಗುರುತಿಸಲು ಅವರ ಅವಶ್ಯಕತೆ ಪೂರೈಸಲು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ವರ್ಷ ಮಕ್ಕಳ ಪರಿಸ್ಥಿತಿ ಹಾಗೂ ವಿಚಾರಗಳ ಕುರಿತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ನಡೆಸಲಾಗುತ್ತದೆ ಇದರಿಂದ ಮಕ್ಕಳು ಮುಕ್ತ ಮನಸಿನಿಂದ ತಮ್ಮ ಸಮಸ್ಯೆ ಹಂಚಿಕೊಳ್ಳಲು ಸಹಕಾರಿ ಎಂದರು.ಕಾರ್ಯಗಾರದಲ್ಲಿ ಮಕ್ಕಳ ಅಭಿವೃದ್ಧಿ ಸಮಿತಿ ಸದಸ್ಯರಾದ ಲಕ್ಷ್ಮಿಪ್ರಸನ್ನ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್, ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು. 20 ಕೆಸಿಕೆಎಂ 1

ಚಿಕ್ಕಮಗಳೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿದರು. ತಾರಾನಾಥ್‌, ರಂಗನಾಥ್‌, ಮಹಾಂತೇಶ್ ಭಜಂತ್ರಿ ಇದ್ದರು.