ಬಾಲ್ಯ ವಿವಾಹದಿಂದ ಶಿಶು, ತಾಯಿ ಮರಣ ಹೆಚ್ಚಳ

| Published : Nov 23 2025, 02:00 AM IST

ಸಾರಾಂಶ

ತಾಲೂಕಿ‌ನ ಆಲತ್ತೂರಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಡೇಶನ್, ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರ ಹಾಗೂ ಅಲತ್ತೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಕೀಲ ಅರವಿಂದ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1989 ನ.20 ರಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಅಂಗೀಕರಿಸಿದ ದಿನವನ್ನು ಅಂತಾರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಮಕ್ಕಳಿಗಾಗಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕನ್ನು ನೀಡಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಬಗ್ಗೆ ಮಾಹಿತಿ ನೀಡಿದರು.

ವಿವಾಹವಾಗಲು ಹೆಣ್ಣಿಗೆ ಕನಿಷ್ಠ 18 ವರ್ಷ, ಗಂಡಿಗೆ ಕನಿಷ್ಠ 21 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದೆ. ಇದನ್ನು ಮೀರಿದರೆ ಕಾನೂನಿನಡಿ ಶಿಕ್ಷೆಯಾಗುತ್ತದೆ. ಬಾಲ್ಯ ವಿವಾಹದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ವಯಸ್ಸಿಗೆ ಮೀರಿದ ಸಂಸಾರದ ಹೊರೆ ಬೀಳುತ್ತದೆ. ಶಿಶು, ತಾಯಿ ಮರಣ ಹೆಚ್ಚಾಗುತ್ತದೆ. ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಪೋಷಕರು ತಮ್ಮ ಬಡತನ ಅನಕ್ಷರತೆ ಮೂಢನಂಬಿಕೆ ಹಾಗೂ ತಮ್ಮ ಮಕ್ಕಳ ಮೇಲಿನ ಅಪನಂಬಿಕೆಯಿಂದ ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಲು ಮುಂದಾಗುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಹಸಗೂಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ಆರೋಗ್ಯವೇ ಭಾಗ್ಯ. ಉತ್ತಮ ಆರೋಗ್ಯಕ್ಕಾಗಿ ಮನೆಯಲ್ಲಿ ಮಾಡಿದ ಆಹಾರವನ್ನೇ ಸೇವನೆ ಮಾಡಬೇಕು. ಜಂಕ್ ಫುಡ್ ಸೇವನೆ ತಪ್ಪಿಸಬೇಕು. ಹದಿ ಹರೆಯದವರ ಆರೋಗ್ಯ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಯೋಗ ಕ್ಷೇಮವನ್ನು ಒಳಗೊಂಡಿದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಆರೋಗ್ಯಕ್ಕೆ ಸಹಕಾರಿ ಎಂದರು.

ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಸಂಸ್ಥೆಯ ಜಿಲ್ಲಾ ಸಂಯೋಜಕ ಜಿ.ಸಿ.ನಾರಾಯಣಸ್ವಾಮಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರು ವಹಿಸಿದ್ದರು.