22ರಂದು ಬಾಲ್ಯವಿವಾಹ ತಡೆ ಜಾಗೃತಿ ಜಾಥಾ

| Published : Sep 20 2025, 01:01 AM IST

ಸಾರಾಂಶ

ಬಾಲ್ಯವಿವಾಹ ಪ್ರಕರಣ ಹೆಚ್ಚಾಗಿದ್ದು ಬಾಲ ಗರ್ಭಿಣಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಏರುಗತಿಯಲ್ಲಿವೆ. ಇದನ್ನು ತಡೆಯಲು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ಕುಷ್ಟಗಿ:

ಬಾಲ್ಯವಿವಾಹ ನಿಯಂತ್ರಣದ ಕುರಿತು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೆ. 22ರಂದು ಬೃಹತ್ ಪ್ರಮಾಣದ ಜಾಗೃತಿ ಜಾಥಾ ಆಯೋಜಿಸಬೇಕೆಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಬಾಲ್ಯವಿವಾಹ ನಿಯಂತ್ರಣ ಜಾಗೃತಿ ಜಾಥಾ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಬಾಲ್ಯವಿವಾಹ ಪ್ರಕರಣ ಹೆಚ್ಚಾಗಿದ್ದು ಬಾಲ ಗರ್ಭಿಣಿ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಏರುಗತಿಯಲ್ಲಿವೆ. ಇದನ್ನು ತಡೆಯಲು ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪಿಡಿಒ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.

ಬಾಲ್ಯವಿವಾಹ ನಿಯಂತ್ರಣ ಜಾಗೃತಿ ಕುರಿತು ಗೋಡೆ ಬರಹ, ಚಿತ್ರ, ಸರ್ಕಾರಿ ಕಟ್ಟಡಗಳ ಮೇಲೆ 1098 ಸಂಖ್ಯೆ ಬರೆಸಬೇಕು. ಜಾಗೃತಿ ಕಾರ್ಯಕ್ರಮದ ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಮಾಡಿಸಬೇಕು. ಶಾಲೆಗಳಿಗೆ ದಸರಾ ರಜೆ ಇರುವುದರಿಂದ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರನ್ನು ಕಾರ್ಯಕ್ರಮಕ್ಕೆ ಕರೆಸಬೇಕೆಂದು ಹೇಳಿದರು.

ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಮಾತನಾಡಿ, ಪಿಡಿಒಗಳು ಈ ಕುರಿತು ಪೂರ್ವಭಾವಿ ಸಭೆ ಕರೆದು ಅಧಿಕಾರಿಗಳೊಂದಿಗೆ ಚರ್ಚಿಸಬೇಕೆಂದರು.

ತಾಪಂ ಇಒ ಪಂಪಾಪತಿ ಹಿರೇಮಠ, ಜಾಗೃತಿ ಕಾರ್ಯಕ್ರಮದಂದು ಯಾರಿಗೂ ರಜೆ ಇರುವುದಿಲ್ಲ. ಜಾಥಾದಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಈ ವೇಳೆ ಡಾ. ಆನಂದ ಗೋಟೂರು, ಸಮಾಜ ಕಲ್ಯಾಣ ಇಲಾಖೆ ಬಾಲಚಂದ್ರ ಸಂಗನಾಳ, ಸಿಡಿಪಿಒ ಯಲ್ಲಮ್ಮ ಹಂಡಿ ಸೇರಿದಂತೆ ಪಿಡಿಒ, ಅಂಗನವಾಡಿ ಮೇಲ್ವಿಚಾರಕಿಯರು, ಅನ್ನಪೂರ್ಣ ಪಾಟೀಲ ಇದ್ದರು.

ಸಾಮೂಹಿಕ ವಿವಾಹದಲ್ಲೂ ಬಾಲ್ಯವಿವಾಹ

ಯರಗೇರಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಬಾಲ್ಯವಿವಾಹದ ಪ್ರಕರಣಗಳು ಕಂಡು ಬಂದಿದ್ದು ಅವರ ವಿರುದ್ಧ ದೂರು ದಾಖಲಿಸಿದೆ. ಜುಮಲಾಪುರು ಮತ್ತು ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಕಂಡು ಬಂದಿವೆ ಎಂದು ಸಿಡಿಪಿಒ ಯಲ್ಲಮ್ಮ ಹಂಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ತಪ್ಪಿತಸ್ತರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.