ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಲ್ಲಬೇಕು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿತ್ಯಕ್ತ ಮಕ್ಕಳ ರಕ್ಷಣೆಪೋಷಕರಿಂದ ಬೇರ್ಪಟ್ಟ ಪರಿತ್ಯಕ್ತ ಮಕ್ಕಳನ್ನು, ಬಾಲಕಾರ್ಮಿಕತೆ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಗೊಳಗಾದ ಮಕ್ಕಳ ಪಾಲನೆ ಹಾಗೂ ರಕ್ಷಣೆಗೆ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಅ ಕಾನೂನುಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊತ್ತಿರುವ ನಾವೇಲ್ಲರೂ ನಿಯಮಬದ್ದವಾಗಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿದರೆ ಮಾತ್ರ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿರುವ ನಾವುಗಳು ಕಾನೂನನ್ನು ಅರಿತು ಪಾಲಿಸಬೇಕು ಎಂದರು.
ಜನತೆಗೆ ಅರಿವು ಮೂಡಿಸಿಈ ವ್ಯವಸ್ಥೆಯಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಎಸಗುವ ತಪ್ಪಿನಿಂದ ಕೆಲವೊಮ್ಮೆ ವ್ಯವಸ್ಥೆಯ ದೂಷಣೆಗೆ ಒಳಗಾಗುತ್ತದೆ. ಅಂತಹ ಸ್ಥಿತಿಗೆ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿ ಅವಕಾಶವನ್ನು ಜಿಲ್ಲೆಯಲ್ಲಿ ಮಾಡಿಕೊಡಬಾರದು. ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಪೋಸ್ಟರ್, ವಿಡಿಯೋ, ಕಿರುಚಿತ್ರಗಳ ಮುಖಾಂತರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅರಿವನ್ನು ಮೂಡಿಸಬೇಕು ಎಂದರು. ಮಕ್ಕಳ ಪಾಲನೆ ಪೋಷಣೆ ಹಾಗೂ ರಕ್ಷಣೆಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್, ಸಾಂತ್ವನ ಕೇಂದ್ರಗಳು ಹೆಚ್ಚಿನ ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಬಾಲ ಮಂದಿರ ಹಾಗೂ ಸ್ವಾಧಾರ ಕೇಂದ್ರಗಳಲ್ಲಿ ಪುಟ್ಟ ಮಕ್ಕಳಿಗೆ ನೀಡುವ ಪೌಷ್ಟಿಕವಾದ ಆಹಾರ ತಯಾರಿಸುವಾಗ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಬೇಕು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಬಾಲ್ಯವಿವಾಹ ತಡೆಗಟ್ಟಲು ಸಮಿತಿನಮ್ಮ ಜಿಲ್ಲೆ ಬೇರೆ ರಾಜ್ಯಗಳ ಗಡಿಯನ್ನು ಹಂಚಿಕೊಂಡಿದೆ. ಆ ಭಾಗದಲ್ಲಿ ಬಾಲ್ಯ ವಿವಾಹಗಳು ಪ್ರಸ್ತುತವು ಕಂಡುಬರುತ್ತಿವೆ. ಗ್ರಾಮ ಪಂಚಾಯ್ತಿ ಹಂತದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಸಮಿತಿಗಳು ಇನ್ನಷ್ಟು ಕ್ರೀಯಾಶೀಲವಾಗಿ ಪ್ರಕರಣಗಳು ಜರುಗದಂತೆ ತಡೆಗಟ್ಟಬೇಕು. ಒಂದು ವೇಳೆ ಬಾಲ್ಯವಿವಾಹ ಪ್ರಕರಣ ಜರುಗಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸುವ ಪೋಷಕರು ಭಾಗಿಯಾಗುವ ಎಲ್ಲರ ಮೇಲು ಕಾನೂನು ಕ್ರಮ ಜರುಗಿಸಬೇಕು. ಆಗ ಬಾಲ್ಯ ವಿವಾಹಗಳು ನಿಯಂತ್ರಣಕ್ಕೆ ಬರುತ್ತವೆ ಎಂದರು.
ಮುಚ್ಚಿಹಾಕಲು ಯತ್ನಿಸಬೇಡಿಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿವೆ. ಇವು ಸಂಪೂರ್ಣವಾಗಿ ನಿಲ್ಲೆಬೇಕಾದರೆ ಪ್ರತಿಯೊಬ್ಬರು ಜಾಗೃತರಾಗಬೇಕು. ಜೊತೆಗೆ ಅಂತಹ ಪ್ರಕರಣ ಜರುಗಿದರೆ ಕಾನೂನಿನ ಕ್ರಮಕ್ಕೆ ಒಳಪಡಿಸುವುದನ್ನು ತಪ್ಪಿಸಲು ಯಾವುದೇ ವ್ಯಕ್ತಿಗಳು, ಅಧಿಕಾರಿಗಳು ಯತ್ನಿಸಬಾರದು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ತಿಳಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮುನಿನಾರಾಯಣಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಮಂಜುನಾಥ್, ಪೋಲಿಸ್ ಉಪಾಧೀಕ್ಷಕರು ಎಸ್. ಶಿವಕುಮಾರ್, ಮಕ್ಕಳ ಅಭಿವೃದ್ಧಿ ಅಧಿಕಾರಿ ವೆಂಕಟಯ್ಯ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಧರಯ್ಯ, ಸಂಪನ್ಮೂಲ ವ್ಯಕ್ತಿ ಎಂ ಜಿ ಗೋಪಾಲ್, ಪೊಲೀಸ್ ತರಬೇತಿದಾರ ರೋಹಿತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.