ಮಡಿಕೇರಿ: ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮ

| Published : Feb 06 2025, 11:48 PM IST

ಸಾರಾಂಶ

ಒಳ್ಳೆಯ ವಿಷಯಗಳನ್ನು ಭರತ ಖಂಡಕ್ಕಲದೆ ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಅದ್ವಿತೀಯರು ಸವಿತಾ ಮಹರ್ಷಿಗಳು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಐಶ್ವರ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಒಳ್ಳೆಯ ವಿಷಯಗಳನ್ನು ಭರತ ಖಂಡಕ್ಕಲ್ಲದೆ ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಅದ್ವಿತೀಯರು ಸವಿತಾ ಮಹರ್ಷಿಗಳು. ಸಂಗೀತ ಜ್ಞಾನದಲ್ಲಿ ಪರಿಣಿತರಾಗಿರುವವರು ಸವಿತಾ ಸಮಾಜದವರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಬುಧವಾರ ನಗರದ ಗಾಂಧಿ ಭವನದಲ್ಲಿ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಬ್ಬ ಮನುಷ್ಯನ ಮುಖವನ್ನು ನೋಡಿ ಅವನ ಮನಸ್ಸಲ್ಲಿ ಯಾವ ರೀತಿಯ ಭಾವನೆಗಳಿದೆ ಎಂದು ತಿಳಿದುಕೊಳ್ಳುವುದನ್ನು ಕಾಲ ಕಾಲಗಳಿಂದ ಯುಗ ಯುಗಗಳಿಂದ ಇಡೀ ಸಮಾಜದ ಬಾಹ್ಯ ಸೌಂದರ್ಯದ ಮೂಲಕ ಅವರ ಮನಸ್ಸಿನ ಸೌಂದರ್ಯವನ್ನು ಹೆಚ್ಚಿಸುವ ಕೆಲಸವನ್ನು ಸವಿತಾ ಸಮಾಜದವರು ಮಾಡುತ್ತಾ ಬಂದಿದ್ದಾರೆ. ಅಲ್ಲದೆ ಆಯುರ್ವೇದವನ್ನು ಸಹ ಕುಲಕಸುಬಾಗಿಸಿಕೊಂಡಿದ್ದರು. ಆಗಿನ ಸಮಯದಲ್ಲಿ ಪ್ರತಿಯೊಂದು ಹಳ್ಳಿಹಳ್ಳಿಯಲ್ಲಿ ಆಯುರ್ವೇದ ತಿಳಿದಿದ್ದ ಸವಿತ ಸಮಾಜದವರು ಇದ್ದರು. ಒಬ್ಬ ರಾಜನಾದವರಿಗೆ ಒಂದು ರಾಜ್ಯದಲ್ಲಿ ಮಾತ್ರ ಗೌರವ ಇರುತ್ತದೆ. ಆದರೆ ಒಬ್ಬ ಪಂಡಿತರಿಗೆ ಪ್ರಪಂಚದಾದ್ಯಂತ ಗೌರವವನ್ನು ಕೊಡುತ್ತಾರೆ. ಅದಕ್ಕೆ ಒಂದು ಬಹುದೊಡ್ಡ ಉದಾಹರಣೆ ಎಂದರೆ ಆಯುರ್ವೇದ ಪಾಂಡಿತ್ಯ ಹೊಂದಿರುವ ಸಾಮವೇದ ಸಂಗೀತ ಜ್ಞಾನ ಪರಿಣಿತರಾದ ಸವಿತಾ ಸಮಾಜದವರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಹೇಳಿದರು.

ಸವಿತಾ ಮಹರ್ಷಿಯ ಕುರಿತಾಗಿ ಪುರಾಣ ಹಾಗೂ ಪೌರಾಣಿಕ ಹಿನ್ನೆಲೆಯಲ್ಲಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿದ್ದಾರೆ ಎಂದರು.

ಈ ಸಮುದಾಯದವರು ಪುರಾತನ ಕಾಲದಿಂದಲೂ ಸಂಗೀತ, ವಾದ್ಯ ನುಡಿಸುವುದು ಹಾಗೂ ಆಯುರ್ವೇದವನ್ನು ತನ್ನ ಕುಲಕಸುಬಾಗಿಸಿಕೊಂಡಿದ್ದಾರೆ. ಹಾಗೆಯೇ ಸವಿತಾ ಸಮುದಾಯದ ಕುರಿತು ಅನೇಕ ಶಾಸನಗಳಲ್ಲಿ ಉಲ್ಲೇಖವಿದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೋರನ ಸರಸ್ವತಿ ಅವರು ಮಾತನಾಡಿ ಕೆಲಸದಲ್ಲಿ ಸವಿತಾ ಸಮಾಜದವರ ಸಾಮರ್ಥ್ಯವನ್ನು ಹೆಚ್ಚು ಗೌರವಿಸಬೇಕು. ಈ ಸಮುದಾಯವು ಪ್ರಪಂಚದಾದ್ಯಂತ ತನ್ನ ಗೌರವವನ್ನು ಪಡೆದುಕೊಂಡಿರುವ ಸಮುದಾಯವಾಗಿದೆ ಎಂದರು.

ಸವಿತಾ ಮಹರ್ಷಿಗಳ ಆದರ್ಶಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದರು. ಡಿ.ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹಾದೇವಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಇತರರು ಇದ್ದರು.