Child marriage: Young man gets 20 years in prison
ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಯುವಕನಿಗೆ ಪೋಕ್ಸೊ ಕಾಯ್ದೆಯಡಿ 20ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 15ಸಾವಿರ ದಂಡವನ್ನು ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯ ವಿಧಿಸಿದೆ. ಯುವಕ ಹಾಗೂ ಬಾಲಕಿಯ ಪೋಷಕರಿಗೂ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ. ಅಳಂದ ತಾ. ಗುಳೊಳ್ಳಿ ತಾಂಡಾದ ನಿತಿನ್ ನೀಲು ಪವಾರ (25) ಶಿಕ್ಷೆಗೆ ಒಳಗಾದ ಯುವಕ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಯುವಕನ ತಂದೆ ನೀಲು ಪವಾರ, ತಾಯಿ ಹಾಗೂ ಬಾಲಕಿಯ ಪೋಷಕರಿಗೆ ಒಂದು ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ನ್ಯಾ. ಮಹ್ಮದ್ ಮುಜೀರ್ ಉಲ್ಲಾ ಸಿ.ಜಿ. ಆದೇಶಿಸಿದ್ದಾರೆ. 2023ರ ಮೇ 17 ರಂದು ಯುವಕನ ಮದುವೆಯು 16 ವರ್ಷದ ಬಾಲಕಿ ಜೊತೆಗೆ ಆಳಂದದ ಕಲ್ಯಾಣ ಮಂಟಪದಲ್ಲಿ ನೆರವೇರಿತ್ತು. ಬಾಲಕಿಗೆ 17ವರ್ಷ 6 ತಿಂಗಳಿದ್ದಾಗ ಮಗುವಾಗಿತ್ತು. ಹೆರಿಗೆಗಾಗಿ ಆಸ್ಪತ್ರೆಗೆ ತೆರಳಿದಾಗ ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿತ್ತು. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು.
