ಸಾರಾಂಶ
ಬೆಂಗಳೂರು : ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ದೃಶ್ಯ ನೋಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ 24 ವರ್ಷದ ಯುವಕನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಬೆಂಗಳೂರಿನ ಸೋಮನಹಳ್ಳಿ ನಿವಾಸಿ ಪವನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣ ಕುರಿತು ದೂರು ದಾಖಲಿಸಿರುವ ರಾಮನಗರ ಸಿಇಎನ್ ಠಾಣೆ ಅಥವಾ ಕರ್ನಾಟಕದ ಇನ್ಯಾವುದೇ ಪೊಲೀಸರು ಅರ್ಜಿದಾರರನ್ನು ಬಂಧಿಸಿದ ಸಂದರ್ಭದಲ್ಲಿ ಆತನನ್ನು ಬಿಡುಗಡೆ ಮಾಡಬೇಕು. ಸೆ.9ರಂದು ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿ ಮುಂದೆ ಅರ್ಜಿದಾರ ಹಾಜರಾಗಬೇಕು. ವಿಚಾರಣೆ ಉದ್ದೇಶಕ್ಕಾಗಿ ಆತನನ್ನು ವಶಕ್ಕೆ ಪಡೆಯಲು ತನಿಖಾಧಿಕಾರಿ ಸ್ವತಂತ್ರರಾಗಿದ್ದಾರೆ. ಆದರೆ, ಆತನನ್ನು ಅದೇ ದಿನ ಸಂಜೆ 6 ಗಂಟೆಯೊಳಗೆ ₹1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಅರ್ಜಿದಾರ ಸಕಾರಣವಿಲ್ಲದೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಬಾರದು. ಸಾಕ್ಷ್ಯಧಾರ ನಾಶಕ್ಕೆ ಯತ್ನಿಸಬಾರದು. ತನಿಖಾಧಿಕಾರಿ ಕರೆದಾಗೆಲ್ಲಾ ಅವರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಅರ್ಜಿದಾರನಿಗೆ ನ್ಯಾಯಪೀಠ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ.ತನಿಖೆಗೆ ಸಹಕಾರ ನೀಡಲು
ಸಿದ್ಧ ಎಂದು ಮುಚ್ಚಳಿಕೆ
ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ವೆಬ್ ಪೋರ್ಟಲ್ ರೂಪಿಸಿದೆ. ಅದರಂತೆ ರಾಷ್ಟ್ರೀಯ ಸೈಬರ್ ಪೋರ್ಟಲ್/ರಾಷ್ಟ್ರೀಯ ನಾಪತ್ತೆ ಹಾಗೂ ಶೋಷಿತ ಮಕ್ಕಳ ಕೇಂದ್ರ ನೀಡಿದ ಮಾಹಿತಿಯ ಪ್ರಕಾರ ಪ್ರಾಥಮಿಕ ವಿಚಾರಣೆ ನಡೆಸಿದಾಗ ಅರ್ಜಿದಾರ ಯುವಕ ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಿಸಿರುವುದು ಹಾಗೂ ವಿಡಿಯೋವನ್ನು ತನ್ನ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೊಡ್ ಮಾಡಿರುವುದು ಗೊತ್ತಾಗಿದೆ. ಅರ್ಜಿದಾರನ ಕೃತ್ಯಕ್ಕೆ ಗರಿಷ್ಠ ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರನಿಗೆ 24 ವರ್ಷವಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧನಿರುವುದಾಗಿ ಮುಚ್ಚಳಿಕೆ ನೀಡಿರುವುದರಿಂದ ಆತನಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.ಸೆಷನ್ಸ್ ಕೋರ್ಟ್‌ನಲ್ಲಿ
ಬೇಲ್ ಅರ್ಜಿ ತಿರಸ್ಕೃತ
ಅಪ್ರಾಪ್ತರ ಅಶ್ಲೀಲ ಚಿತ್ರ ವೀಕ್ಷಿಸಿದ ಹಾಗೂ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ ಆರೋಪದಲ್ಲಿ ಅರ್ಜಿದಾರ ಯುವಕನ ವಿರುದ್ಧ 2023ರ ಸೆ.23ರಂದು ರಾಮನಗರ ಸಿಇಎನ್ ಅಪರಾಧಗಳ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಬಂಧನ ಭೀತಿಯಿಂದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಯುವಕ ರಾಮನಗರ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ 2024ರ ಆ.3ರಂದು ವಜಾಗೊಳಿಸಿತ್ತು. ಇದರಿಂದ, ಆತ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.