ಮಕ್ಕಳ ರಕ್ಷಣೆ, ಮಕ್ಕಳ ದತ್ತು ಪ್ರಕ್ರಿಯೆ ಕಾರ್ಯಾಗಾರಕ್ಕೆ ಚಾಲನೆ

| Published : Mar 19 2025, 12:37 AM IST

ಮಕ್ಕಳ ರಕ್ಷಣೆ, ಮಕ್ಕಳ ದತ್ತು ಪ್ರಕ್ರಿಯೆ ಕಾರ್ಯಾಗಾರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಬಿಡಿಡಿಎ ಸಭಾಂಗಣದಲ್ಲಿ ಬಾಲ ನ್ಯಾಯ ಕಾಯ್ದೆ-2015, ದತ್ತು ಪ್ರಕ್ರಿಯೆ ಮತ್ತು ಮಕ್ಕಳ ರಕ್ಷಣೆ ಕುರಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ನೋಂದಣಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಡಿಎ ಸಭಾಂಗಣದಲ್ಲಿ ಬಾಲ ನ್ಯಾಯ ಕಾಯ್ದೆ-2015, ದತ್ತು ಪ್ರಕ್ರಿಯೆ ಮತ್ತು ಮಕ್ಕಳ ರಕ್ಷಣೆ ಕುರಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯ ಕುಮಾರ್,

ಮಕ್ಕಳ ಪಾಲನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪ್ತ ಸಮಾಲೋಚಕರು, ಗೃಹಪಾಲಕ, ಗೃಹಪಾಲಕಿಯರು ಹಾಗೂ ಸಿಬ್ಬಂದಿಗಳು ಮಕ್ಕಳನ್ನು ಅರ್ಥಮಾಡಿಕೊಂಡು ಜನಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆನಾಗಪ್ಪ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣೆ ಪೋಷಣೆಯಲ್ಲಿ ಸಿಬ್ಬಂದಿಗಳ ಪಾತ್ರ ಬಹುಮುಖ್ಯ. ಮಕ್ಕಳ ಪ್ರತಿಯೊಂದು ವೈಯಕ್ತಿಕ ಕಡತ ನಿರ್ವಹಿಸುವ ಕುರಿತು ಹಾಗೂ ಮಕ್ಕಳೊಂದಿಗೆ ಸಮಲೋಚನೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ತರಬೇತಿ ಪಡೆಯಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಜಲಾಲಪ್ಪ ಮಾತನಾಡಿ, ಶಿಬಿರಾರ್ಥಿಗಳು ತಮ್ಮ ಸಾಮರ್ಥ್ಯ ವೃದ್ಧಿಸಿಕೊಂಡು ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದರು.

ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಎಚ್.ಸಿ. ರಾಘವೇಂದ್ರ ಮಕ್ಕಳ ಹಕ್ಕು ಹಾಗೂ ಮಕ್ಕಳಿಗೆ ಸಂಬಂಧಿತ ಕಾನೂನುಗಳ ಕುರಿತು ತಿಳಿಸಿದರು.

ವಕೀಲೆ ಶಿವಲೀಲಾ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆಗಳು ಕುರಿತು ಮಾಹಿತಿ ನೀಡಿದರು.

ಉಪ ನೋಂದಣಿ ಅಧಿಕಾರಿ ದೇವೇಂದ್ರಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಂಜುನಾಥ, ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್, ಮಂಜುನಾಥ, ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ, ಮಕ್ಕಳ ಸಹಾಯವಾಣಿ ಯೋಜನಾ ಸಂಯೋಜಕ ಕೆ.ಆನಂದ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಮಕ್ಕಳ ಸಹಾಯವಾಣಿಯ ಸಿಬ್ಬಂದಿ, ಮಕ್ಕಳ ಪಾಲನಾ ಸಂಸ್ಥೆಗಳ ಸಿಬ್ಬಂದಿ ಹಾಗೂ 60ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.